ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಕಿಚ್ಚುಹಚ್ಚಿದ ಸಂಗೀತ!

By Prasad
|
Google Oneindia Kannada News

ಬೆಂಗಳೂರು, ಜೂ. 06 : ಬಹುಶಃ ಶುಕ್ರವಾರ ಸಂಜೆ ಚೌಡಯ್ಯ ಸ್ಮಾರಕ ಭವನದಲ್ಲಿ ಹರಿದ ಅತ್ಯದ್ಭುತ ಸಂಗೀತ ಸುಧೆಯನ್ನು ಆಲಿಸಿ, ಯುಟ್ಯೂಬ್ ಮುಖ್ಯಸ್ಥರಾಗಿದ್ದ ವೆಂಕಟ್ ಪಂಚಪಕೇಸನ್ ಅವರ ಆತ್ಮ ಇದ್ದಲ್ಲಿಯೇ ನಲಿದಾಡಿರುತ್ತದೇನೋ. ಆ ಪರಿ ಮೋಡಿಯನ್ನು ಮಾಡಿತ್ತು ವೆಂಕಟ್ ಸವಿನೆನಪಿಗಾಗಿ ಆಯೋಜಿಸಲಾಗಿದ್ದ ಸಂಗೀತ ಸಂಜೆ.

ಪಂಡಿತ್ ಶಿವಕುಮಾರ್ ಶರ್ಮಾ ಅವರ ಮಗ ರಾಹುಲ್ ಶರ್ಮಾ ಅವರ ಸಂತೂರ್, ದೇಶದ ಅತ್ಯುತ್ತಮ ಡ್ರಮ್ಮರ್ ಆನಂದನ್ ಶಿವಮಣಿ, ಪಿಯಾನೋ ಪಂಟರ್ ಸ್ಟೀಫನ್ ದೇವಸ್ಸಿ, ಮ್ಯಾಂಡೋಲಿನ್ ಮಾಂತ್ರಿಕ ಯು ರಾಜೇಶ್, ಘಟ ಪಂಡಿತ ಗಿರಿಧರ್ ಉಡುಪ, ಭಾರದ್ವಾಜ್ ಸಟ್ಟವಳ್ಳಿ ಪರ್ಕ್ಯೂಷನ್ ಮತ್ತು ತಬಲಾ ಮೋಡಿಗಾರ ಸತ್ಯಜಿತ್ ತಲ್ವಾಲ್ಕರ್ ಹರಿಸಿದ ಸಂಗೀತ ಸಾಗರದಲ್ಲಿ ಶ್ರೋತೃಗಳು ಅಕ್ಷರಶಃ ಎರಡೂವರೆ ಗಂಟೆಗಳ ಕಾಲ ತೇಲಾಡಿದರು, ನಲಿದಾಡಿದರು, ಕುಳಿತಲ್ಲಿಯೇ ಕುಣಿದಾಡಿದರು. [ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ]

Music beats cancer at Chowdaiah memorial hall

ಕರಳು ಕ್ಯಾನ್ಸರ್ ನಿಂದ ಇತ್ತೀಚೆಗೆ ನಿಧನರಾದ ವೆಂಕಟ್ ಅವರಿಗೆ ಇಂಡಿಯನ್ ಕ್ಯಾನ್ಸರ್ ಸೊಸೈಟಿ 'ಬೀಟ್ ಕ್ಯಾನ್ಸರ್ ಮ್ಯೂಸಿಕಲ್ ನೈಟ್' ಆಯೋಜಿಸುವ ಮೂಲಕ ಅರ್ಥಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ. ಕ್ಯಾನ್ಸರನ್ನು ದೈಹಿಕವಾಗಿ ಗೆಲ್ಲಲಾಗದಿದ್ದರೂ ಮಾನಸಿಕವಾಗಿ ಗೆದ್ದಿದ್ದ, ಕ್ಯಾನ್ಸರ್ ಪೀಡಿತರಿಗೆ ಸಾಕಷ್ಟು ಹಣ ಸಹಾಯ ಮಾಡಿದ್ದ, ಸಂಗೀತವನ್ನು ಅಪಾರವಾಗಿ ಪ್ರೇಮಿಸುತ್ತಿದ್ದ ವೆಂಕಟ್ ಅವರ ಜೀವನಪ್ರೇಮಕ್ಕೆ ಸಲ್ಲಿಸಿದ ಅತ್ಯುತ್ತಮ ಗೌರವವಾಗಿತ್ತು ಈ ಕಾರ್ಯಕ್ರಮ. ನಿಜಕ್ಕೂ ಜೀವನೋತ್ಸಾಹ ಚೌಡಯ್ಯದಲ್ಲಿ ಮೇಳೈಸಿತ್ತು. [ಕ್ಯಾನ್ಸರ್ ವಿರುದ್ಧ ಸಹೋದರನ ಸವಾಲ್!]

Music beats cancer at Chowdaiah memorial hall

ವೆಂಕಟ್ ಅವರ ಆಪ್ತ ಸ್ನೇಹಿತ ಮತ್ತು ಸಹೋದ್ಯೋಗಿಯಾಗಿದ್ದ ಭರತ್ ವಿಜಯ್ ಅವರು, "ವೆಂಕಟ್ ಜೊತೆ ಕೆಲಸ ಮಾಡುವುದೇ ಎಲ್ಲರಿಗೂ ಹೆಮ್ಮೆಪಡುವ ಸಂಗತಿಯಾಗಿತ್ತು. ಅಷ್ಟೊಂದು ಜೀವನಪ್ರೀತಿ ಅವರಲ್ಲಿತ್ತು. ಇಂದು ವಿಶ್ವದಾದ್ಯಂತ ಜನರೆಲ್ಲ ಮೊಬೈಲಿನಲ್ಲಿ ಯುಟ್ಯೂಬನ್ನು ಅತ್ಯಂತ ಸರಾಗವಾಗಿ ನೋಡಲು ಸಾಧ್ಯವಾಗುವಂತೆ ಮಾಡಿದ್ದು ವೆಂಕಟ್ ಅವರ ಅದ್ಭುತ ಸಾಧನೆ. ವೆಂಕಟ್ ಅವರು ಎಆರ್ ರೆಹಮಾನ್ ಅವರ ಅತೀದೊಡ್ಡ ಅಭಿಮಾನಿಯಾಗಿದ್ದರು" ಎಂದು ವೆಂಕಟ್ ಅವರನ್ನು ಕೊಂಡಾಡಿದರು. ಅಲ್ಲಿ ಸ್ನೇಹಿತನನ್ನು ಕಳೆದುಕೊಂಡ ದುಃಖವಿರಲಿಲ್ಲ, ಇಂಥ ಸ್ನೇಹಿತನನ್ನು ಪಡೆದಿದ್ದೆನೆಂಬ ಹಮ್ಮಿತ್ತು. [ಸಿಗರೇಟ್ ಕೊಲ್ಲಲ್ಲ, ಕ್ಯಾನ್ಸರ್ ಕೊಲ್ಲತ್ತೆ!]

Music beats cancer at Chowdaiah memorial hall

ಭರತ್ ಅವರದೆರಡು ಮಾತುಗಳು ಬಿಟ್ಟರೆ ಅಲ್ಲಿ ಭಾಷಣಕ್ಕೆ, ಭಾವೋದ್ವೇಗದ ನುಡಿಗಳಿಗೆ ಆಸ್ಪದವೇ ಇರಲಿಲ್ಲ. ಸಂಗೀತದ ಸುನಾಮಿ ಆರಂಭವಾಗುವ ಮೊದಲು ಜೀವಹಿಂಡುವ ಕ್ಯಾನ್ಸರನ್ನು ಮೆಟ್ಟಿನಿಂತ ದಿಟ್ಟಗಾತಿ ಭಾಷಣಿ ಕುರಿತು ಒಂದು ನಿಮಿಷ 48 ಸೆಕೆಂಡುಗಳ ಕಿರುಚಿತ್ರ ತೋರಿಸಲಾಯಿತು. ಭಾಷಿಣಿ ಅವರ ಹೋರಾಟಗಾರ್ತಿಯ ಜೀವನ, ಅವರ ಸ್ಫೂರ್ತಿಯುತ ನುಡಿಗಳು ಎಲ್ಲ ಕ್ಯಾನ್ಸರ್ ಪೀಡಿತರಿಗೆ ಅಮೃತ ಸಿಂಚನ ಮಾಡಿದಂತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ವಿರುದ್ಧ ತೊಡೆತಟ್ಟಿ ನಿಲ್ಲಲು ಪ್ರೇರೇಪಿಸುವಂಥ ಮಾಂತ್ರಿಕ ಸಂಗೀತ ಚೌಡಯ್ಯದಲ್ಲಿ ತುಂಬಿಕೊಂಡಿತ್ತು.

Music beats cancer at Chowdaiah memorial hall

ರಾಹುಲ್ ಶರ್ಮಾ ಅವರು ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಬರುವ ಚಾರುಕೇಶಿ ರಾಗದಲ್ಲಿ ತ್ಯಾಗರಾಜರ ಕೃತಿಯನ್ನು ಸಂತೂರ್ ನಿಂದ ಹೊರಹೊಮ್ಮಿಸಿದರು. ಅದಕ್ಕೆ ಸತ್ಯಜಿತ್ ತಲ್ವಾಲ್ಕರ್ ಅವರ ತಬಲಾ ವಾದನ ಭರ್ಜರಿ ಮನರಂಜನೆಯನ್ನು ನೀಡಿತು. ನಂತರ, ಶಿವಮಣಿ, ಯು ರಾಜೇಶ್, ಗಿರಿಧರ್ ಉಡುಪ ಮತ್ತು ಸ್ಟೀಫನ್ ದೇವಸ್ಸಿ ಅವರ ಫ್ಯೂಷನ್ ಮ್ಯೂಸಿಕ್ ಗಂಧರ್ವಲೋಕವನ್ನೇ ಅಲ್ಲಿ ಸೃಷ್ಟಿಸಿದಂತಿತ್ತು. ಕೊನೆಗೆ ಎಲ್ಲ ಸಪ್ತ ಸಂಗೀತಪಟುಗಳು ಒಟ್ಟುಗೂಡಿ ನೀಡಿದ ಸಂಗೀತವನ್ನು ಪದಗಳಲಿ ವರ್ಣಿಸಲು ಸಾಧ್ಯವಿಲ್ಲ, ದಯವಿಟ್ಟು ಕ್ಷಮಿಸಿ.

Music beats cancer at Chowdaiah memorial hall

ಪ್ರತಿವರ್ಷ ಜೂನ್ 7ನ್ನು ಕ್ಯಾನ್ಸರ್ ಗೆದ್ದವರ ದಿನವನ್ನಾಗಿ ಆಚರಿಸಲಾಗುತ್ತಿದೆ. ಬೆಂಗಳೂರಿನ ಭಾರತೀಯ ಕ್ಯಾನ್ಸರ್ ಸೊಸೈಟಿ, ಕ್ಯಾನ್ಸರ್ ವಿರುದ್ಧ ಹೋರಾಡಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಇನ್ನಷ್ಟು ಸ್ವಯಂಸೇವಕರ ಅಗತ್ಯವಿದೆ ಎಂದು ಹೇಳಿದೆ. ಹೆಚ್ಚಿನ ವಿವರಗಳು ಬೇಕಿದ್ದರೆ ಈ ವೆಬ್ ಸೈಟ್ ಸಂದರ್ಶಿಸಿ. ಈಮೇಲ್ ವಿಳಾಸ : [email protected].
English summary
Fusion Music by Sivamani, Rahul Sharma, Stephen Devassy, U Rajesh, Giridhar Udupa, Bharadwaj Sathavalli, Satyajit Talwalkar mesmerized the music lovers at Chowdaiah memorial hall in Bengaluru. Indian Cancer Society had organized musical night in the memory of Venkat Panchakesan, who contributed lot to fight against cancer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X