ಕಲ್ಯಾಣ ಕರ್ನಾಟಕಕ್ಕೆ ಶುಭ ಸುದ್ದಿಕೊಟ್ಟ ಟ್ರೂ ಜೆಟ್

ಬಳ್ಳಾರಿ, ಫೆಬ್ರವರಿ 22; ಬಳ್ಳಾರಿ ಮತ್ತು ರಾಜ್ಯದ ನೂತನ ಜಿಲ್ಲೆ ವಿಜಯನಗರ ಜನರಿಗೆ ಸಿಹಿಸುದ್ದಿ. ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ಜಿಲ್ಲೆಯ ಜನರು ಇನ್ನು ಮುಂದೆ ವಿಮಾನದಲ್ಲಿ ಸಂಚಾರ ನಡೆಸಬಹುದಾಗಿದೆ.

ಟ್ರೂ ಜೆಟ್ ವಿಮಾನಯಾನ ಸಂಸ್ಥೆ ಜಿಂದಾಲ್ (ತೋರಣಗಲ್ಲು) ವಿಮಾನ ನಿಲ್ದಾಣಕ್ಕೆ ಪುನಃ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಹೈದರಾಬಾದ್-ವಿದ್ಯಾನಗರ-ಹೈದರಾಬಾದ್ ಮತ್ತು ವಿದ್ಯಾನಗರ-ಬೆಂಗಳೂರು-ವಿದ್ಯಾನಗರ ನಡುವೆ ಟ್ರೂ ಜೆಟ್ ವಿಮಾನಯಾನ ಸಂಸ್ಥೆ ವಿಮಾನ ಸೇವೆ ಮತ್ತೆ ಆರಂಭಿಸಲಿದೆ. ಇದರ ಜೊತೆ ಬೆಂಗಳೂರು-ಬೀದರ್-ಬೆಂಗಳೂರು ಮಾರ್ಗದಲ್ಲಿ ಸಹ ವಿಮಾನ ಸೇವೆ ಪ್ರಾರಂಭ ಮಾಡಲಿದೆ.

Tru Jet Resuming Flight Services For Jindal Toranagal Airport

ಹಲವು ದಿನಗಳಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ವಿಮಾನಗಳ ಸಂಚಾರ ರದ್ದಾಗಿತ್ತು. ಕೇವಲ ಖಾಸಗಿ ವಿಮಾನಗಳು ಸಂಚಾರ ನಡೆಸುತ್ತಿದ್ದವು. ಈಗ ಪ್ರಯಾಣಿಕ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಜನರಿಗೆ ಸಿಹಿಸುದ್ದಿ ಸಿಕ್ಕಿದೆ.

ಕರ್ನಾಟಕ ಸರ್ಕಾರದ ಒತ್ತಾಯ ಮತ್ತು ಕೇಂದ್ರ ವಿಮಾನ ಸಚಿವಾಲಯದ ಒತ್ತಾಯದ ಮೇರೆಗೆ ಮತ್ತೆ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ವಿದ್ಯಾನಗರ ವಿಮಾನ ನಿಲ್ದಾಣ; ತೋರಣಗಲ್ಲು ಗ್ರಾಮದಲ್ಲಿ ವಿಮಾನ ನಿಲ್ದಾಣವಿದೆ. ನಿಲ್ದಾಣದ ಸಮೀಪ ವಿದ್ಯಾನಗರ ಎಂಬ ಪಟ್ಟಣ ಇರುವುದರಿಂದ ತೋರಣಗಲ್ಲು ವಿಮಾನ ನಿಲ್ದಾಣವನ್ನು ವಿದ್ಯಾನಗರ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ.

ತೋರಣಗಲ್ಲು ಗ್ರಾಮದಲ್ಲಿ ತನ್ನ ಘಟಕ ಹೊಂದಿರುವ JSW ಸ್ಟೀಲ್ ಸಂಸ್ಥೆ ಈ ವಿಮಾನ ನಿಲ್ದಾಣದ ಒಡೆತನ ಹೊಂದಿದೆ. ಕಂಪನಿ ತನ್ನ ಖಾಸಗಿ ಉದ್ದೇಶಕ್ಕೆ ಈ ವಿಮಾನ ನಿಲ್ದಾಣ ಬಳಕೆ ಮಾಡುತ್ತಿತ್ತು. ಆದ್ದರಿಂದ ಇದು ಖಾಸಗಿ ವಿಮಾನ ನಿಲ್ದಾಣವಾಗಿತ್ತು.

ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ 2004ರಲ್ಲಿ ಜಿಂದಾಲ್ ವಿಮಾನ ನಿಲ್ದಾಣದಿಂದ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಿತು. 2005ರ ನವೆಂಬರ್‌ನಲ್ಲಿ ವಾಣಿಜ್ಯ ಸಂಚಾರವನ್ನು ಆರಂಭಿಸಲಾಯಿತು.

ಏರ್ ಟ್ರಾಫಿಕ್ ಕಂಟ್ರೋಲ್ ಸೇರಿದಂತೆ ಸುಮಾರು 25 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸಲಾಯಿತು. ಬಳಿಕ ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ಹಾರಾಟ ಆರಂಭವಾಯಿತು.

ಬಳಿಕ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆ ವ್ಯಾಪ್ತಿಗೆ ತರಲಾಯಿತು. ಆದರೆ ಬಳಿಕ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರ ರದ್ದುಗೊಂಡಿತು. ಪುನಃ ಖಾಸಗಿ ವಿಮಾನಗಳ ಸಂಚಾರಕ್ಕೆ ಮಾತ್ರ ನಿಲ್ದಾಣದ ಬಳಕೆಯಾಗುತ್ತಿತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆಗೊಂಡು ವಿಜಯನಗರ ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿದೆ. ಹಂಪಿ ಸಹ ವಿಶ್ವಪಾರಂಪರಿಕಪಟ್ಟಿಗೆ ಸೇರಿದ್ದು, ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಮತ್ತೆ ಜಿಂದಾಲ್ ವಿಮಾನ ನಿಲ್ದಾಣದಿಂದ ವಾಣಿಜ್ಯ ಸಂಚಾರ ಆರಂಭಿಸಬೇಕು ಎಂದು ಒತ್ತಡ ಹೇರಿತ್ತು. ಈಗ ವಿಮಾನ ಹಾರಾಟ ಮತ್ತೆ ಆರಂಭವಾಗಲಿದೆ.

ಬಳ್ಳಾರಿ ವಿಮಾನ ನಿಲ್ದಾಣ; ಇನ್ನು ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಜನಾರ್ದನ ರೆಡ್ಡಿ ಸಚಿವರಾಗಿದ್ದಾಗ ಪ್ರಯತ್ನ ನಡೆಸಿದರು. ಚಾಗಗೂರು ಗ್ರಾಮದಲ್ಲಿ 987 ಎಕರೆ ಭೂಮಿಯನ್ನು ಸಹ ಇದಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಯಿತು.

ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಚೆನ್ನೈ ಮೂಲದ ಮಾರ್ಗ್‌ ಕಂಪನಿ ಜೊತೆ 2010ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಮಾರ್ಗ್ ಶ್ರೀ ಕೃಷ್ಣದೇವರಾಯ ಏರ್‌ಪೋರ್ಟ್‌ ಪ್ರೈವೇಟ್ ಲಿ. ಎಂದು ನಾಮಕರಣ ಮಾಡಲಾಯಿತು. ಆದರೆ ವಿಮಾನ ನಿಲ್ದಾಣ ನಿರ್ಮಾಣವಾಗಲೇ ಇಲ್ಲ.

ನೀರಾವರಿ ಜಮೀನನ್ನು ಯೋಜನೆಗೆ ಸ್ವಾಧೀನ ಮಾಡಿಕೊಂಡಿದ್ದಾರೆ ಎಂದು ರೈತರು ವಿರೋಧ ವ್ಯಕ್ತಪಡಿಸಿದರು. ಭೂ ಸ್ವಾಧೀನ ವಿವಾದ ಸುಪ್ರೀಂಕೋರ್ಟ್‌ ತನಕ ಹೋಯಿತು. ಕರ್ನಾಟಕ ಹೈಕೋರ್ಟ್‌ನಲ್ಲಿಯೂ ತಕರಾರು ಅರ್ಜಿ ಸಲ್ಲಿಕೆಯಾಯಿತು. ವಿಮಾನ ನಿಲ್ದಾಣ ಯೋಜನೆ ಸ್ಥಗಿತವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+