Mylara Karnika 2026: ಗೊರವಯ್ಯ ನುಡಿದ ಈ ವರ್ಷದ ಮೈಲಾರ ಕಾರ್ಣಿಕ ಭವಿಷ್ಯವಾಣಿ
Mylara Karnika 2026: ಮೈಲಾರಲಿಂಗಶ್ವರ ಜಾತ್ರೆಯಲ್ಲಿ ನುಡಿಯುವ ಭವಿಷ್ಯವಾಣಿಗಳು ನಿಜವಾಗುತ್ತವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ರಾಜ್ಯಾದ್ಯಂತ ಭಕ್ತರು ಈ ಕ್ಷಣಕ್ಕಾಗಿ ಕಾತರದಿಂದ ಕಾದು ಕುಳಿತಿರುತ್ತಾರೆ. ಅದರಂತೆಯೇ ಇದೀಗ ಗೊರವಪ್ಪ ಭವಷ್ಯವಾಣಿ ನುಡಿದಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹರಪನಹಳ್ಳಿಯಲ್ಲಿರುವ ಪ್ರಸಿದ್ಧ ದೊಡ್ಡ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯ ಅಂಗವಾಗಿ ಈ ವರ್ಷದ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಭಕ್ತರ ಅಪಾರ ನಿರೀಕ್ಷೆಯ ನಡುವೆ ನಡೆದ ಈ ಪಾರಂಪರಿಕ ಜಾತ್ರೆಯಲ್ಲಿ ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ಭವಿಷ್ಯವಾಣಿಯಲ್ಲಿ ಏನಿದೆ?: ಈ ಬಾರಿ 'ಅಂಬಲಿ ರಾಶಿಗೆ ಮುತ್ತಿನ ಗಿಣಿ, ಸಮೃದ್ಧಿಯಾಯ್ತಲೇ ಪರಾಕ್' ಎಂಬ ಕಾರ್ಣಿಕ ನುಡಿಸಿದ್ದಾರೆ. ಇದರ ಅರ್ಥ ವರ್ಷಪೂರ್ತಿ ಉತ್ತಮ ಮಳೆಯಾಗಲಿದೆ, ಕೃಷಿ ಬೆಳೆಯು ಸಮೃದ್ಧಿಯಾಗಲಿದೆ ಹಾಗೂ ರಾಜ್ಯದ ಜನತೆ ಸುಖಸಮೃದ್ಧಿಯಿಂದ ಬದುಕುವರು ಎಂದು ಭಕ್ತರು ಹಾಗೂ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಭರತ ಹುಣ್ಣಿಮೆಯ ದಿನ ನುಡಿಯುವ ಈ ಕಾರ್ಣಿಕವನ್ನು ವರ್ಷಭ ವಿಷ್ಯವಾಣಿ ಎಂಬಂತೆ ನೋಡಲಾಗುತ್ತದೆ. ದೇವಾಲಯದಲ್ಲಿ ಸೇರಿದ್ದ ಸಾವಿರಾರು ಭಕ್ತರು ಜಯಘೋಷ ಮೊಳಗಿಸುತ್ತಾ ಕಾರ್ಣಿಕ ನುಡಿಗೆ ಸಾಕ್ಷಿಯಾದರು. ಈ ವರ್ಷದ ಕಾರ್ಣಿಕ ರಾಜ್ಯಕ್ಕೆ ಶುಭ ಸೂಚನೆ ನೀಡಿದೆ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿದೆ.
ಕಾರ್ಣಿಕ ಭವಿಷ್ಯವಾಣಿ ಮಹತ್ವ: ಮೈಲಾರ ಕಾರ್ಣಿಕ ಕರ್ನಾಟಕದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಒಂದಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಯ ಸಂದರ್ಭದಲ್ಲೇ ಕಾರ್ಣಿಕ ನುಡಿಯುವ ಪರಂಪರೆ ಇದೆ. ಈ ಕಾರ್ಣಿಕವನ್ನು ಭವಿಷ್ಯವಾಣಿಯಂತೆ ಭಕ್ತರು ಗೌರವದಿಂದ ಸ್ವೀಕರಿಸುತ್ತಾರೆ. ವರ್ಷಕ್ಕೆ ಒಂದೇ ಬಾರಿ, ಭರತ ಹುಣ್ಣಿಮೆಯ ದಿನದಂದು ಈ ಕಾರ್ಣಿಕ ನುಡಿಯಲಾಗುತ್ತದೆ.
ಪಾರಂಪರಿಕ ನಂಬಿಕೆಯ ಪ್ರಕಾರ, ದೇವರ ದರ್ಶನ ಪಡೆದ ಗೊರವಯ್ಯ ನುಡಿದ ಮಾತುಗಳೇ ಕಾರ್ಣಿಕವಾಗಿರುತ್ತವೆ. ಈ ನುಡಿಗಳು ಮುಂದಿನ ಒಂದು ವರ್ಷದ ರಾಜ್ಯ, ದೇಶ, ಮಳೆ, ಬೆಳೆ, ರಾಜಕೀಯ ಹಾಗೂ ಸಮಾಜದ ಸ್ಥಿತಿಗತಿಗಳನ್ನು ಸೂಚಿಸುತ್ತವೆ ಎಂಬ ನಂಬಿಕೆ ಇದೆ. ಕಾರ್ಣಿಕ ನುಡಿದ ತಕ್ಷಣ, ಅದರ ಅರ್ಥವನ್ನು ಪಂಡಿತರು ಮತ್ತು ಹಿರಿಯರು ವಿಶ್ಲೇಷಣೆ ಮಾಡುತ್ತಾರೆ.
ಮೈಲಾರ ಕಾರ್ಣಿಕವನ್ನು ಕೇಳಲು ಕರ್ನಾಟಕ ಮಾತ್ರವಲ್ಲದೆ ಪಕ್ಕದ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಮೈಲಾರಕ್ಕೆ ಆಗಮಿಸುತ್ತಾರೆ. ಈ ಜಾತ್ರೆ ಗ್ರಾಮೀಣ ಸಂಸ್ಕೃತಿ, ಜನಪದ ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳ ಸಂಗಮವಾಗಿದೆ. ವೈಜ್ಞಾನಿಕ ದೃಷ್ಟಿಯಿಂದ ಇದಕ್ಕೆ ಸ್ಪಷ್ಟ ಆಧಾರಗಳಿಲ್ಲದಿದ್ದರೂ, ಜನರ ನಂಬಿಕೆ, ಭಕ್ತಿ ಮತ್ತು ಸಾಂಸ್ಕೃತಿಕ ಮಹತ್ವವೇ ಮೈಲಾರ ಕಾರ್ಣಿಕದ ವಿಶೇಷತೆಯಾಗಿದೆ.












Click it and Unblock the Notifications