ಬಳ್ಳಾರಿ ಜಿಲ್ಲೆಯಲ್ಲಿ 459 ಮತಗಟ್ಟೆ ಕೇಂದ್ರಗಳು ಅತೀ ಸೂಕ್ಷ್ಮ
ಬಳ್ಳಾರಿ, ಮೇ. 11 : ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 19,11,568 ಜನರು ಮತದಾನ ಮಾಡುವ ಹಕ್ಕು ಪಡೆದಿದ್ದು, 2,127 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ 9,54,559 ಪುರುಷರು ಮತ್ತು 9,56,770 ಮಹಿಳೆಯರು ಹಾಗೂ 239 ಇತರೆ ಮತದಾರರಿದ್ದಾರೆ.
18,143 ವಿಕಲಚೇತನರಿದ್ದರೆ, ಮಹಿಳಾ ಮತದಾರರು ಹೆಚ್ಚಿರುವ 17 ಪ್ರದೇಶಗಳಲ್ಲಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಇರುತ್ತಾರೆ ಎನ್ನುವುದು ವಿಶೇಷ.
ಜಿಲ್ಲೆಯಲ್ಲಿ 459 ಮತಗಟ್ಟೆಗಳು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ. 367 ಪೋಲಿಂಗ್ ಕೇಂದ್ರಗಳಲ್ಲಿ ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ.

ಜಿಲ್ಲೆಯಲ್ಲಿ 17,168 ಜನ ಅಂಚೆ ಮತದಾನಕ್ಕೆ ಅರ್ಹತೆ ಪಡೆದಿದ್ದು, ಅವರಲ್ಲಿ 12,537 ಜನ ಫಾರಂ ನಂ.12 ತೆಗೆದುಕೊಂಡು ಭರ್ತಿ ಮಾಡಿ 11,556 ಜನರು ಮಾತ್ರ ಅಂಚೆ ಮತಪತ್ರ ಪಡೆದಿದ್ದಾರೆ. ಮತಗಟ್ಟೆಗಳಲ್ಲಿ ವಿಕಲಚೇತನರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ 806 ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.
ಮತದಾನ ಪ್ರಕ್ರಿಯೆಗೆ 9,340 ಸರ್ಕಾರಿ ಸಿಬ್ಬಂದಿ, ಆಶಾ, ಅಂಗನವಾಡಿ ಸೇರಿದಂತೆ ಅರೆ ಸರ್ಕಾರಿಯ 2,209 ಸೇರಿದಂತೆ ಒಟ್ಟು 11,995 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. 391 ಬಸ್ ಸೇರಿ ಒಟ್ಟು 610 ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಲಾಗುತ್ತಿದೆ.
ಜಿಲ್ಲೆಯ ಒಂಭತ್ತು ವಿಧಾನಸಭಾ ಕ್ಷೇತ್ರಗಳ ಮತಯಂತ್ರ ಸಂಗ್ರಹಕ್ಕೆ 21 ಸ್ಟ್ರಾಂಗ್ ರೂಂಗಳನ್ನು ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮತಗಳ ಎಣಿಕೆಗೆ ಒಂಭತ್ತು ಕೊಠಡಿಗಳಲ್ಲಿ ಪ್ರತಿಯೊಂದು ಕ್ಷೇತ್ರಕ್ಕೆ ಹದಿನೈದು ಟೇಬಲ್ ಗಳ ವ್ಯವಸ್ಥೆ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ.

ಜಿಲ್ಲೆಯಲ್ಲಿ 766 ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಅಂದರೆ 733 ಅಕ್ರಮ ಮದ್ಯ ಮಾರಾಟ, ಸಾಗಾಟಕ್ಕೆ ಸಂಬಂಧಿಸಿದವು. ಈ ಪ್ರಕರಣಗಳಲ್ಲಿ 38.30 ಲಕ್ಷ ಮೌಲ್ಯದ 7603 ಲೀಟರ್ ಮದ್ಯ ಮತ್ತು 60 ಬೈಕ್, ಒಂದು ಆಟೋ ವಶವಡಿಸಿಕೊಳ್ಳಲಾಗಿದೆ ಎಂದರು.
ಚುನಾವಣಾ ಸಂಬಂಧಿತ 43.93 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಪಾಲನೆಗಾಗಿ 9 ಎಫ್‍ಎಸ್ ಟಿ ತಂಡ, 21 ಎಸ್‍ಎಸ್ ಟಿ ತಂಡ, 5 ಎಂಸಿಸಿ ತಂಡ, 5ವಿಎಸ್ ಟಿ ತಂಡಗಳು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 6 ಪ್ರಕರಣಗಳು ದಾಖಲಾಗಿವೆ.












Click it and Unblock the Notifications