ಮಹಿಳೆಯರ ಅಶ್ಲೀಲ ಜಾಹೀರಾತು ನಿಷೇಧಿಸಲಿದೆ ಸರ್ಕಾರ

ಇದಕ್ಕಾಗಿ ಸರ್ಕಾರ 27 ವರ್ಷಗಳ ಹಿಂದೆ ಜಾರಿಗೆ ಬಂದ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಪೋಸ್ಟರ್ ತೆಗೆದುಹಾಕಬೇಕು ಎಂಬ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿದೆ. ಈ ಮೂಲಕ ನಗರದಲ್ಲಿ ಮಹಿಳೆಯ ಅರೆಬೆತ್ತಲೆ ಪೋಸ್ಟರ್ ಗಳಿಗೆ ಕಡಿವಾಣ ಹಾಕಲು ಸಿದ್ಧತೆ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, 1986ರಲ್ಲಿ ಜಾರಿಗೆ ಬಂದ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸುವ ಪೋಸ್ಟರ್ ಗಳನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ದೇಶದ ಯಾವ ನಗರಗಳಲ್ಲೂ ಈ ಕಾಯ್ದೆ ಕಡ್ಡಾಯವಾಗಿ ಜಾರಿಗೆ ಬಂದಿಲ್ಲ. ಬೆಂಗಳೂರಿನಲ್ಲಿ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರಲಾಗುವುದು ಎಂದರು. ಪ್ರಚಾರ ಸಾಮಾಗ್ರಿಗಳ ಮೂಲಕ ಕಾಯ್ದೆ ಕುರಿತು ಮಾಹಿತಿ ನೀಡಲಾಗುವುದು. ಕಾಯ್ದೆ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.
ಕೆಲವು ದಿನಗಳಲ್ಲಿ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಕುರಿತು, ಗೃಹ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹ ಇಲಾಖೆ ಕಾರ್ಯದರ್ಶಿಗಳು ಸೇರಿದಂತೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗುವುದು. ಕಾಯ್ದೆ ಉಲ್ಲಂಘಿಸಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.
ಶಿಕ್ಷೆ ಏನು : ಕಾಯ್ದೆಯ ಸೆಕ್ಷನ್ 3ರ ಅನ್ವಯ ಮಹಿಳೆಯರ ಅಶ್ಲೀಲ ಪೋಸ್ಟರ್ ಪ್ರದರ್ಶಿಸುವವರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವಿಧಿಸಲು ಅವಕಾಶವಿದೆ. ಜಾಹೀರಾತು ಪ್ರದರ್ಶಿಸುವ ಕಂಪನಿಗಳು, ಜಾಹೀರಾತು ಮುದ್ರಿಸುವ ಮುದ್ರಕರಿಗೂ ಈ ನಿಯಮ ಅನ್ವಯಿಸಲಿದೆ.
ಸೆಕ್ಷನ್ 4ರಂತೆ ಪೋಸ್ಟರ್ ತಯಾರಕರು, ಮಾರಾಟಗಾರರು, ವಿತರಕರು ಸಹ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಪುಸ್ತಕ, ಕರಪತ್ರ, ಸಿನಿಮಾ ಪೋಸ್ಟರ್ ಮುಂತಾದವುಗಳನ್ನು ಮುದ್ರಿಸುವವರು ಈ ವ್ಯಾಪ್ತಿಗೆ ಒಳಪಡುತ್ತಾರೆ.
ಈ ಕಾಯ್ದೆ ಜಾರಿಗೆ ಬಂದರೆ, ಸರ್ಕಾರದ ಯಾವುದೇ ಗೆಜೆಟೆಡ್ ಅಧಿಕಾರಿ ಜಾಹೀರಾತು ಫಲಕಗಳು, ಪುಸ್ತಕ, ಕರಪತ್ರ, ಚಿತ್ರಗಳು ಮುಂತಾದವುಗಳನ್ನು ವಶಪಡಿಸಿಕೊಳ್ಳಬಹುದು. ಇವುಗಳ ಮುದ್ರಣ, ಪ್ರಚಾರ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದು.
ಸರ್ಕಾರದ ಈ ನೀತಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ವಿವಿಧ ಮಹಿಳಾ ಸಂಘಟನೆಗಳು ಸ್ವಾಗತಿಸಿವೆ. ಈ ಮೂಲಕವಾದರೂ ಮಹಿಳೆಯರ ಅಸಭ್ಯ ಪೋಸ್ಟರ್ ಗಳ ಹಾವಳಿ ನಗರದಲ್ಲಿ ಕಡಿಮೆಯಾಗಲಿ ಎಂದು ಹೇಳಿದ್ದಾರೆ.












Click it and Unblock the Notifications