ಬಿಜೆಪಿಗೆ ಹೋಗಲು ನಾನು ಕ್ಯೂ ನಿಂತಿಲ್ಲ : ಯಡಿಯೂರಪ್ಪ
ಬೆಂಗಳೂರು, ಸೆ.6 : ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತರುವ ಪ್ರಯತ್ನ ಬಿರುಸಿನಿಂದ ನಡೆಯುತ್ತಿದೆ. ಈ ನಡುವೆ ನನ್ನನ್ನು ಕರೆತರಲು ಯಾವ ನಾಯಕರು ಪ್ರಯತ್ನ ನಡೆಸುವುದು ಬೇಡ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಳಿ ಮಾಜಿ ಸಿಎಂ ಸದಾನಂದ ಗೌಡ ನೇತೃತ್ವದ ಬಿಜೆಪಿ ನಿಯೋಗ ತೆರಳಿ, ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ಕುರಿತು ಚರ್ಚಿಸಿದ್ದರು. ಆದರೆ, ಇದಕ್ಕೆ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗೊಂದಿಗೆ ಮಾತನಾಡಿದ ಯಡಿಯೂರಪ್ಪ, ನರೇಂದ್ರ ಮೋದಿ ಅವರಿಗೆ ನನ್ನ ಮೇಲೆ ಒಳ್ಳೆಯ ಅಭಿಪ್ರಾಯವಿದೆ. ನನಗೂ ಅವರ ಬಗ್ಗೆ ಒಳ್ಳೆಯ ಭಾವನೆಯಿದೆ. ನನ್ನ ವಿಚಾರವಾಗಿ ಅವರ ಬಳಿ ಯಾವ ಬಿಜೆಪಿ ನಾಯಕರು ಲಾಬಿ ಮಾಡುವುದು ಬೇಡ ಎಂದರು.
ಈ ಬೆಳವಣಿಗೆಗಳ ನಡುವೆಯೇ ಬುಧವಾರ ಕೆಜೆಪಿ ಕಾರ್ಯರ್ಧ್ಯಕ್ಷೆ ಶೋಭಾ ಕರಂದ್ಲಾಜೆ ಮತ್ತು ತಮ್ಮ ಪರಮಾಪ್ತ ಲೆಹರ್ ಸಿಂಗ್ ಜೊತೆ ನವದೆಹಲಿಗೆ ಯಡಿಯೂರಪ್ಪ ತೆರಳಿದ್ದರು. ಈ ದೆಹಲಿ ಭೇಟಿ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಬಿಜೆಪಿಗೆ ಬಿಎಸ್ವೈ ಮರಳುತ್ತಾರಾ? ಎಂಬ ಚರ್ಚೆಗೆ ನಾಂದಿ ಹಾಡಿದೆ. ಯಡಿಯೂರಪ್ಪ ಅವರ ಕೆಲವೊಂದು ಸ್ಪಷ್ಟನೆಗಳು ಹೀಗಿವೆ.

ನಾನು ಬಿಜೆಪಿಗೆ ಹೋಗಲು ಕ್ಯೂ ನಿಂತಿಲ್ಲ
"ಬಿಜೆಪಿಗೆ ವಾಪಸಾಗಲು ನಾನು ಕ್ಯೂನಲ್ಲಿ ನಿಂತಿಲ್ಲ" ಸದಾನಂದಗೌಡರು ನನ್ನ ಪರವಾಗಿ ಪ್ರಯತ್ನ ನಡೆಸುವ ಅಗತ್ಯವಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಪಕ್ಷಕ್ಕೆ ನಾನ್ಯಾಕೆ ವಾಪಸ್ ಹೋಗಲಿ? ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.

ಮೋದಿ ಜೊತೆ ಲಾಬಿ ಬೇಡ
ನನ್ನ ಮತ್ತು ಮೋದಿ ನಡುವೆ ಒಳ್ಳೆಯ ಸಂಬಂಧವಿದೆ. ಬಿಜೆಪಿಗೆ ನನ್ನನ್ನು ಕರೆತರಲು ರಾಜ್ಯದ ಬಿಜೆಪಿ ನಾಯಕರು ನರೇಂದ್ರ ಮೋದಿ ಬಳಿ ತೆರಳಿ ಚರ್ಚಿಸುವುದು ಸೂಕ್ತವಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮೋದಿ ಜೊತೆ ನನ್ನ ಕುರಿತು ಮಾತುಕತೆ ನಡೆಸಬಾರದು ಎಂದು ಮನವಿ ಮಾಡಿದ್ದಾರೆ.

ಸಭೆಯ ನಂತರ ನೋಡೋಣ
ಸೆ. 8ರಂದು ನವ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನನ್ನ ಬಗ್ಗೆ ಚರ್ಚೆಯಾಗುತ್ತದೆ ಎಂಬ ಮಾತನ್ನು ಸದಾನಂದಗೌಡರು ಹೇಳಿದ್ದಾರೆ. ಸಭೆಯಲ್ಲಿ ಏನಾಗುತ್ತದೆ ಎಂದು ತಿಳಿದುಕೊಂಡು ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸುತ್ತೇನೆ ಎಂದು ಯಡಿಯೂರಪ್ಪ ಹೇಳುವ ಮೂಲಕ ಬಿಜೆಪಿಗೆ ವಾಪಸ್ ಆಗುವ ಸುಳಿವು ನೀಡಿದ್ದಾರೆ.

ನವದೆಹಲಿ ಭೇಟಿ ಖಾಸಗಿ, ವಿಶೇಷ ಅರ್ಥ ಬೇಡ
ಬುಧವಾರ ಪಕ್ಷದ ಕಾಯಾಧ್ಯಕ್ಷೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಮೇಲ್ಮನೆ ಸದಸ್ಯ ಲೇಹರ್ ಸಿಂಗ್ ಜತೆ ನವದೆಹಲಿಗೆ ತೆರಳಿದ್ದು ಹೌದು. ಆದರೆ, ಇದು ಖಾಸಗಿ ಭೇಟಿ. ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಹೋಗಿದ್ದೆ. ದೆಹಲಿಯಲ್ಲಿ ಯಾವ ಪಕ್ಷದ ನಾಯಕರನ್ನು ಭೇಟಿಯಾಗಿಲ್ಲ. ಈ ಪ್ರವಾಸಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ.

ಪಕ್ಷವನ್ನು ಬಲಿಷ್ಠಗೊಳಿಸಲು ತೀರ್ಮಾನ
ಸೆ.19ರಂದು ಕೆಜೆಪಿ ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಕರೆಯಲಾಗಿದೆ. ಲೋಕಸಭಾ ಚುನಾವಣೆಗೆ ಸಿದ್ಧತೆ ಮತ್ತು ರಾಜ್ಯದಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವ ಕುರಿತು ಚರ್ಚಿಸಲಾಗುವುದು. ಲೋಕಸಭೆ ಚುನಾವಣೆ ಹೊತ್ತಿಗೆ ಕೆಜೆಪಿ ಜತೆಗೆ ಮೈತ್ರಿ ಅನಿವಾರ್ಯ ಎಂಬಂತಹ ವಾತಾವರಣ ನಿರ್ಮಾಣ ಮಾಡುವಂತೆ ಪಕ್ಷ ಸಂಘಟನೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.

ಎಲ್ಲವೂ ಗೊಂದಲ
ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೋ? ಇಲ್ಲವೋ? ಎಂಬುದು ಗೊಂದಲ ಮಯವಾಗಿದೆ. ಸೆ.8ರ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ಸ್ಪಷ್ಟನೆ ದೊರಕುವ ಸಾಧ್ಯತೆ ಇದೆ. ಬಿಜೆಪಿ ಮತ್ತು ಕೆಜೆಪಿ ಕಾರ್ಯಕರ್ತರು ಯಡಿಯೂರಪ್ಪ ನಿರ್ಧಾರದ ಕುರಿತು ಗೊಂದಲದಲ್ಲಿದ್ದಾರೆ.












Click it and Unblock the Notifications