ಚಿನ್ನ ಎಷ್ಟಿದೆ? ದೇವಾಲಯಗಳಿಗೆ ಆರ್ ಬಿಐ ನೋಟಿಸ್

ಕೇರಳದ ಗುರುವಾಯೂರು ಸೇರಿದಂತೆ ಇತರ ಕೆಲವು ದೇವಾಲಯಗಳಿಗೆ ಚಿನ್ನದ ದಾಸ್ತಾನಿನ ಬಗ್ಗೆ ಮಾಹಿತಿ ನೀಡಬೇಕೆಂದು ವಿನಂತಿಸಿರುವ ಪತ್ರ ಆರ್ ಬಿಐಯಿಂದ ಬಂದಿದೆ. ಆರ್ ಬಿಐನ ಪ್ರಾದೇಶಿಕ ನಿರ್ದೇಶಕ ಸಲೀಂ ಗಂಗಾಧರನ್ ಕೂಡ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ ಎಂದು ಖಚಿತಪಡಿಸಿದ್ದಾರೆ.
ದೇವಾಲಯದಲ್ಲಿರುವ ಚಿನ್ನವನ್ನು ಖರೀದಿಸುವ ಪ್ರಸ್ತಾಪ ರಿಸರ್ವ್ ಬ್ಯಾಂಕ್ ಮುಂದಿಲ್ಲ. ಪ್ರತಿ ವರ್ಷದಂತೆ, ದೇವಾಲಯದಲ್ಲಿರುವ ಚಿನ್ನದ ದಾಸ್ತಾನಿನ ಮಾಹಿತಿಯನ್ನು ಮಾತ್ರ ಸಂಗ್ರಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳದ ಗುರುವಾಯೂರು, ತಿರುವನಂತಪುರದ ಅನಂತ ಪದ್ಮನಾಭ, ಶಬರಿಮಲೆ, ತಿರುಪತಿ, ಶಿರಡಿ ಸಹಿತ ದೇಶದ ಪ್ರಮುಖ ದೇವಾಲಯಗಲ್ಲಿ ಅಪಾರ ಪ್ರಮಾಣದ ಚಿನ್ನವಿದೆ. ಸದ್ಯ ಆರ್ ಬಿಐ ಇವುಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯ ಪ್ರಾರಂಭಿಸಿದೆ. (ಕೇರಳ ಅನಂತ ಪದ್ಮನಾಭ ನಿಧಿ ಮೌಲ್ಯ 10 ಲಕ್ಷ ಕೋಟಿ?)
ಅನಂತ ಪದ್ಮನಾಭ ದೇಗುಲದಲ್ಲಿ 1 ಲಕ್ಷ ಕೋಟಿ ಮತ್ತು ತಿರುಪತಿ ದೇಗುಲದಲ್ಲಿ 70 ಸಾವಿರ ಕೋಟಿ ರೂ. ಮೌಲ್ಯದ ಚಿನ್ನವಿದೆ ಎಂದು ಅಂದಾಜಿಸಲಾಗಿದೆ. ರೂಪಾಯಿ ಕುಸಿತದಿಂದ ಕಂಗೆಟ್ಟಿರುವ ಕೇಂದ್ರ ಸರ್ಕಾರ ಈ ಚಿನ್ನದ ಮೇಲೆ ಕಣ್ಣು ಹಾಕಿದೆ. ರೂಪಾಯಿ ಮೌಲ್ಯ ಕುಸಿಯಲು ಚಿನ್ನಕ್ಕಿರುವ ಭಾರೀ ಬೇಡಿಕೆಯೇ ಕಾರಣ ಎಂದು ಸರ್ಕಾರ ವಿಶ್ಲೇಷಿಸುತ್ತಿದೆ.
ಭಾರತದಲ್ಲಿ ಬೇಡಿಕೆ ಇರುವಷ್ಟು ಚಿನ್ನವನ್ನು ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಚಿನ್ನವನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಚಿನ್ನದ ಆಮದು ಹೆಚ್ಚಿದಷ್ಟೂ ಆರ್ಥಿಕತೆ ದುರ್ಬಲವಾಗುತ್ತಾ ಹೋಗುತ್ತದೆ.
ಆದ್ದರಿಂದ ಸ್ಥಳೀಯವಾಗಿ ಚಿನ್ನ ಸಿಗುವಂತೆ ಮಾಡಿ ಪೂರೈಕೆಯನ್ನು ಹೆಚ್ಚಿಸಬೇಕಾದರೆ, ದೇವಸ್ಥಾನಗಳ ಖಜಾನೆಗಳಲ್ಲಿರುವ ಚಿನ್ನ ಹೊರಬರಬೇಕೆಂಬುದು ಕೇಂದ್ರ ಸರ್ಕಾರದ ಅಭಿಪ್ರಾಯ. ಆದ್ದರಿಂದ ಚಿನ್ನದ ದಾಸ್ತಾನಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಚಿನ್ನದ ಬೆಲೆ ಇಳಿಕೆ : ಆರ್ ಬಿಐ ಗೌರ್ನರ್ ಆಗಿ ರಘುರಾಂ ಅಧಿಕಾರ ವಹಿಸಿಕೊಂಡ ನಂತರ ಗುರುವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಗುರುವಾರ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 1250 ರೂ.ಗಳಷ್ಟು ಕಡಿಮೆ ಆಗಿದೆ. 10 ಗ್ರಾಂ ಚಿನ್ನದ ಬೆಲೆ 30,750 ರೂ.ಗಳಾಗಿತ್ತು.












Click it and Unblock the Notifications