ಬೆಂಗಳೂರು KR Hospital ಬಗ್ಗೆ ಎಚ್ಚರವಿರಲಿ
ಬೆಂಗಳೂರು, ಸೆಪ್ಟೆಂಬರ್ 3: ವೈದ್ಯೋ ನಾರಾಯಣೋ ಹರಿಃ ಹನುಮಂತನಗರದ ಕೊನೆಗೆ ಶ್ರೀನಗರದ ಹೆಬ್ಬಾಗಿಲಿನಂತೆ ಹರಡಿಕೊಂಡಿರುವ ಕೆ ಆರ್ ಆಸ್ಪತ್ರೆಯ ದಗಾಕೋರತನ ಕೇಳಿದರೆ ಅಶ್ವಿನೀ ದೇವತೆಗಳೇ ಬೆಚ್ಚಿಬಿದ್ದಾರು. ಹಾಗಿದೆ ಈ ಆಸುಪತ್ರೆ ಮಾಲೀಕನ ಕರ್ಮಕಾಂಡ.
ನಿಜಕ್ಕೂ ಅಬ್ಬಬ್ಬಾ ಎಂದು ಬೊಬ್ಬಿಡುವಷ್ಟು ದಗಲ್ಬಾಜಿತನ ಮೆರೆದಿದ್ದಾರೆ ಇಲ್ಲಿನ ಮಾಲೀಕ ಮತ್ತು ಆಡಳಿತಾಧಿಕಾರಿ ವೈದ್ಯ. ಏನೋ ನೂರಿನ್ನೂರು ಅಥವಾ ಸಾವಿರದ ಲೆಕ್ಕದಲ್ಲಿ ವೈದ್ಯರು ರೋಗಿಗಳಿಗೆ ಮುಂಡಾಯಿಸುತ್ತಾರೆ ಎಂದು ಕೇಳಿದ್ದಿವಿ. ಆದರೆ ಇದೇನ್ರೀ ಇದು. ಈ ದಗಲ್ಬಾಜಿ ಜೋಡಿಯ ಕರಾಮತ್ತು.
ಅದೂ ಹೋಗಿ ಹೋಗಿ ಪೊಲೀಸ್ ಅಧಿಕಾರಿಗೆ ಇವರು ಮುಂಡಾಯಿಸಿದ್ದಾರ್ರೀ. ಇವರನ್ನು ನಿಜಕ್ಕೂ ಆ ಅಶ್ವಿನೀ ದೇವರು ಕ್ಷಮಿಸುವುದಿಲ್ಲ ಬಿಡಿ. ಇವರು ಮಾಡಿರುವ ಅಕ್ಷಮ್ಯ ಅಪರಾಧಕ್ಕೆ ತಕ್ಕ ಶಾಸ್ತಿಯಾಗಲೇಬೇಕು.
ಅದೂ ಎಂಥಾ ರೋಗಿಯನ್ನು ಇವರು ಯಾಮಾರಿಸಿರುವುದು. ಕ್ಯಾನ್ಸರ್ ಹೆಸರು ಕೇಳಿದರೇನೇ ನಿಂತ ನೆಲೆ ಬಾಯ್ಬಿಟ್ಟಂತಾಗುತ್ತದೆ. ಪಾಪ ಅದಾಗಲೇ ಕ್ಯಾನ್ಸರ್ ಎಂಬ ಮಹಾಮಾರಿಯಿಂದ ಬಳಲುತ್ತಿದ್ದ ಪೊಲೀಸಪ್ಪನಿಗಾ ಈ ಬಂದಾ ಜೋಡಿ ಹೀಗೆ ಯಾಮಾರಿಸುವುದು. OMG! ಇವರ ಕರ್ಮಕಾಂಡವನ್ನು ತಪ್ಪದೇ ಓದಿ ತಿಳಿದುಕೊಳ್ಳಿ. ಏಕೆಂದರೆ ಒಂದಲ್ಲಾ ಒಂದು ಬಾರಿ ನಾವೂ ಆಸ್ಪತ್ರೆಗೆ ಹೋಗುವುದು ಸಹಜ. ಸೋ, ನಾವು ಯಾಮಾರಬಾರದು ಅಂದರೆ ಇಂತಹ ಪ್ರಕರಣಗಳನ್ನು, ಇಂತಹ ದಗಲ್ಬಾಜಿಗಳ ಬಗ್ಗೆ ಒಂದು ಬೊಗಸೆ ಹೇಸಿಗೆಯೊಂದಿಗೆ ತಿಳಿದುಕೊಂಡಿರಬೇಕು. ಧಿಕ್ಕಾರವಿರಲಿ ಇಂತಹ ವೈದ್ಯ ಜೋಡಿಗೆ, ಇಂತಹ ಆಸುಪತ್ರೆಗೆ.

1 line story ಏನಪ್ಪಾ ಅಂದರೆ
1 line story ಏನಪ್ಪಾ ಅಂದರೆ ಗಿರಿನಗರ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬೆಟ್ಟೇಗೌಡರು ಬ್ಲಡ್ ಕ್ಯಾನ್ಸರಿಗಾಗಿ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಹನುಮಂತನಗರದಲ್ಲಿರುವ ಕೆ.ಆರ್. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ Cum ಮಾಲೀಕ ಡಾ. ಟಿಆರ್ ಹರಿಪ್ರಸಾದ್ ಮತ್ತು ಆಡಳಿತಾಧಿಕಾರಿ ಮಹೇಶ್ ಅವರಿಬ್ಬರೂ ಪೊಲೀಸ್ ಇಲಾಖೆಯಿಂದ ಬರೋಬ್ಬರಿ 74 ಲಕ್ಷ ರೂ. ಪೀಕಿದ್ದಾರೆ.

ಆಸ್ಪತ್ರೆಗೂ ಬೀಗ ಜಡೀಬೇಕು ಕಣ್ರೀ
ಅದೂ ಒಂದು ಬಾರಿ 2 ಬಾರಿ ಅಲ್ಲ ಬರೋಬ್ಬರಿ 3 ವರ್ಷಗಳ ಕಾಲ 2010ರ ಮಾರ್ಚ್ ನಿಂದ 2013ರ ಜೂನ್‌ವರೆಗೆ ಈ ಖದೀಮ ಜೋಡಿ ರಾಜ್ಯ ಪೊಲೀಸ್ ಇಲಾಖೆಗೇ ವಂಚಿಸಿದೆ. ಅಸಲಿಗೆ ಇವರು 92 ಲಕ್ಷ ರೂ. ಬಿಲ್ ಎತ್ತಿದ್ದಾರೆ. ಅಷ್ಟರಲ್ಲೇ ಪೊಲೀಸರಿಗೆ ಅನುಮಾನದ ವಾಸನೆ ಬಡಿದಿದೆ. ಸರಿಯಾಗಿ investigate ಮಾಡಿ ಖದೀಮ ಜೋಡಿಯನ್ನು ಎತ್ತಿ ಒಳಗೆ ಹಾಕಿದ್ದಾರೆ.
ಇದನ್ನು ಕೇಳಿದ ಇಲ್ಲಿನ ಹಳೆಯ ರೋಗಿಯೊಬ್ಬರು ಹೇಳುತ್ತಿದ್ದರು - ಆಸ್ಪತ್ರೆಗೂ ಬೀಗ ಜಡೀಬೇಕು ಕಣ್ರೀ... ನನ್ನ ಬಳಿಯೂ ಇವರು ಹೀಗೆ ದುಡ್ಡು ಹೀರಿದ್ದಾರೆ. ತಮ್ಮ ಪಾಪ ಕೃತ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಜೈಲಿನ ಏಕಾಂತತೆ ಈ ಖದೀಮ ಜೋಡಿಗೆ ವರವಾಗಲಿ.

ಎಕ್ಸ್ ಟ್ರಾ ಸಮವಸ್ತ್ರ ನೀಡದಷ್ಟು ಅಸಹಾಯಕತೆ ಇರುವಾಗ
ಪೊಲೀಸ್ ಇಲಾಖೆ ದಿನವಿಡೀ/ ವಾರವಿಡೀ ಒಂದೇ ಸಮನೆ ದುಡಿಯುವ ಪೇದೆಗಳಿಗೆ ಎಕ್ಸ್ ಟ್ರಾ ಇರಲಿ ಎಂದು ಒಂದು ಜೊತೆ ಎಕ್ಸ್ ಟ್ರಾ ಸಮವಸ್ತ್ರವನ್ನೇ ನೀಡದಷ್ಟು ಅಸಹಾಯಕ ಪರಿಸ್ಥಿತಿಯಲ್ಲಿದೆ. ಅಂತಹುದರಲ್ಲಿ ಕನಿಷ್ಠ ಆರೋಗ್ಯ ಕಾಪಾಡಿಕೊಳ್ಳಲಾದರೂ 'ಆರೋಗ್ಯ ಭಾಗ್ಯ ಯೋಜನೆ ಟ್ರಸ್ಟ್' ಅಂತ ರಚಿಸಿಕೊಂಡು ಒಂದಷ್ಟು ಒಳ್ಳೆ ಕೆಲಸ ಮಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಈ ಖದೀಮ ವೈದ್ಯ ಜೋಡಿಗೆ ಮನಸ್ಸಾದರೂ ಹೇಗೆ ಬಂತು. 74 ಲಕ್ಷ ರೂ ಯಾರಪ್ಪನ ಮನೆ ಗಂಟು ಅಂತ ಅದಕ್ಕೆ ಇವರು ಆಸೆಪಟ್ಟರು.

ಅಮಾಯಕ ಪೊಲೀಸರು 74 ಲಕ್ಷ ಪಾವತಿಸಿದ್ದಾರೆ!
ಪವಿತ್ರ ಪರಮೋನ್ನತ ವೈದ್ಯ ಕೋಟನ್ನು ಕಳಚಿ ಕ್ರಿಮಿನಲ್ಲುಗಳು ಧರಿಸುವ ಜೈಲು ಸಮವಸ್ತ್ರವನ್ನು ಈ ಜೋಡಿ ಈಗ ಧರಿಸಿದೆ. ASI ಬೆಟ್ಟೇಗೌಡರಿಗೆ ಮೂರು ವರ್ಷ ಕಾಲ ಇವರು ನೀಡಿರುವುದು ಸಾವಿರ ಲೆಕ್ಕದಲ್ಲಿ ಚಿಕಿತ್ಸೆ. ಆದರೆ ಬ್ಲಡ್ ಕ್ಯಾನ್ಸರ್ ಇರುವುದನ್ನು ಮರೆಮಾಚಿ ಬೆಟ್ಟೇಗೌಡರಿಗೆ ಸ್ತನ ಕ್ಯಾನ್ಸರ್ ಇದೆ. ಅದಕ್ಕಾಗಿ ದುಬಾರಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ನೇರವಾಗಿ ಪೊಲೀಸ್ ಇಲಾಖೆಯ ಆರೋಗ್ಯ ಭಾಗ್ಯ ಯೋಜನೆ ಟ್ರಸ್ಟಿಗೆ ಇವರು ಸಲ್ಲಿಸಿರುವ ಒಟ್ಟು ಬಿಲ್ಲುಗಳ ಮೊತ್ತ 92 ಲಕ್ಷ ರೂಪಾಯಿ. ಅಮಾಯಕ ಪೊಲೀಸರು 74 ಲಕ್ಷ ರೂ. ಹಣವನ್ನು ಆಸ್ಪತ್ರೆಗೆ ಪಾವತಿಸಿದ್ದಾರೆ!

ನಿಮ್ಮ ಅನುಭವದಲ್ಲೇ ಹೇಳಿ ನೋಡೋಣ
ಇಲ್ಲಿ ನಿಮಗೂ ಒಂದು ಅನುಮಾನ ಕಾಡುತ್ತದೆ. ಅಲ್ರೀ 74 ಲಕ್ಷ ರೂ ಅಂದ್ರೆ ಏನು ಹುಡುಗಾಟವಾ? ಪೊಲೀಸರೂ ಇದರಲ್ಲಿ ಶಾಮೀಲಾಗಿರುತ್ತಾರೆ ಬಿಡಿ. ಎಲ್ಲಾ ಆದಮೇಲೆ ಈಗ ಬರೀ ಓಳು ಬಿಡುತ್ತಿದ್ದಾರೆ ಎಂದು ನೀವು ಅಮಾಯಕವಾಗಿ ಕೇಳಬಹುದು. ಆದರೆ ಅದು ಹಾಗಲ್ಲ. ನಿಮ್ಮ ಅನುಭವದಲ್ಲೇ ಹೇಳಿ ನೋಡೋಣ. ಚಿಕಿತ್ಸೆಗೆಂದು ನೀವು ಆಸ್ಪತ್ರೆಗೆ ಹೋದಾಗ 'ಆ ಔಷಧಿ ಯಾಕ್ರೀ? ಇಷ್ಟು ದುಡ್ಡು ಯಾಕ್ರೀ? ನಮಗೂ ಎಲ್ಲಾ ವಿವರ ಕೊಡಿ' ಎಂದು ಯಾವತ್ತಾದರೂ ಕೇಳುವ ಧೈರ್ಯ ಮಾಡಿದ್ದೀರಾ? ನೀವು ಕೇಳಿದರೂ ಅವರು ಉತ್ತರ ಕೊಡುತ್ತಾರಾ? ಏನೂ ಬೇಡ. ಸಣ್ಣ ಜ್ವರಕ್ಕೆ ಎಂದು ವೈದ್ಯರಲ್ಲಿಗೆ ಹೋದಾಗ ಆಯಪ್ಪನನ್ನು ಹೆಚ್ಚಿಗೆ ಒಂದು ಪ್ರಶ್ನೆ ಕೇಳಿ ದಕ್ಕಿಸಿಕೊಳ್ಳಿ ನೋಡೋಣಾ!?

ಕ್ಯಾನ್ಸರ್ ಪೀಡಿತ ಬೆಟ್ಟೇಗೌಡರಿಗೆ ಎಲ್ಲಿಯ ವ್ಯವಧಾನ?
ಅಂತಹುದರಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿಗೆ ಸಿಲುಕಿದ್ದ ಬೆಟ್ಟೇಗೌಡರಿಗೆ ಪಾಪ 92 ಲಕ್ಷ ಬಿಲ್ ಯಾಕೆ ಎಂದು ಕೇಳುವ ವ್ಯವಧಾನವಾದರೂ ಇರುತ್ತದಾ? ಇಲ್ಲಿ ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಕೆಆರ್ ಆಸ್ಪತ್ರೆಯು ತಮ್ಮ ಇಲಾಖೆಗೆ ಎಷ್ಟು ಮೊತ್ತದ ಬಿಲ್ ರೈಸ್ ಮಾಡಿದೆ ಎಂಬುದು ಬೆಟ್ಟೇಗೌಡರಿಗೆ ಸುತರಾಂ ಗೊತ್ತಿರಲಿಲ್ಲ. ಚಿಕಿತ್ಸೆ ಪಡೆಯುವುದಷ್ಟೇ ಅವರ ಕೆಲಸವಾಗಿರುತ್ತದೆ. ಬಿಲ್ಲುಗಳು ನೇರವಾಗಿ ಸಂಬಂಧಪಟ್ಟ ಸೆಕ್ಷೆನ್ನಿಗೆ ಹೋಗುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡು ಆಸ್ಪತ್ರೆಯವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಆರೊಗ್ಯ ಭಾಗ್ಯ ಟ್ರಸ್ಟ್ ವಿಭಾಗಕ್ಕೆ ಕಳುಹಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬೆಟ್ಟೇಗೌಡರಿಂದ confidential report
ಈ ಆಸ್ಪತ್ರೆ ಜ್ವರಕ್ಕೆ ಟ್ರೀಟ್ ಮೆಂಟ್ ಕೊಡುವುದಕ್ಕೂ ನಾಲಾಯಕ್ ಅಂತಾಹುದರಲ್ಲಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಅದೂ ಹತ್ತಿಹತ್ತಿರ 1 ಕೋಟಿ ರೂ. ವೆಚ್ಚದ ಚಿಕಿತ್ಸೆ ನೀಡುತ್ತಿದೆಯಲ್ಲಾ ಎಂದು 3 ವರ್ಷಗಳ ನಂತರ ಟ್ರಸ್ಟಿನ ಕೇಸ್ ವರ್ಕರ್ ಗೆ ಅನುಮಾನ ಬಂದಿದೆ. ಅಷ್ಟು ಸಾಕಿತ್ತು ಪೊಲೀಸರಿಗೆ. ಅಪ್ರತ್ಯಕ್ಷವಾಗಿ ತನಿಖೆಗೆ ಇಳಿದೇ ಬಿಟ್ಟರು. ಮೊದಲು ಬೆಟ್ಟೇಗೌಡರಿಂದ confidential report ಪಡೆದಿದೆ. ಏನಪ್ಪಾ ನೀನೂ ಇದರಲ್ಲಿ ಕೈಜೋಡಿಸಿದ್ದೀಯಾ? ಏನು ಕಥೆ ಎಂದು. ಅದಕ್ಕಿಂತ ಮೊದಲು ತಾವು 92 ಲಕ್ಷ ರೂ ಚಿಕಿತ್ಸೆ ಪಡೆದಿರುವುದನ್ನು ಕೇಳಿ ಬೆಟ್ಟೇಗೌಡರಿಗೆ ಜಂಘಾಬಲವೇ ಉಡುಗಿಹೋಗಿದೆ. ಮರಣಶಯ್ಯೆಯಲ್ಲಿರುವವನು ನಾನು. ಇಂತಹ ಹೇಯ ಕೃತ್ಯವೆಸಗಲಾರೆ ಎಂದು ಅವರು ಕೈಚೆಲ್ಲಿದ್ದಾರೆ.

ಕಾರ್ಯಾಚರಣೆಗಿಳಿದ ಡಿಸಿಪಿ ರೇವಣ್ಣ
ಸರಿ ಹಾಗಾದರೆ ನೀವು ಪಡೆದಿರುವ ಚಿಕಿತ್ಸೆಯ ವಿವರ ಕೇಸ್ ಶೀಟ್ ಇಲಾಖೆಗೆ ಒಪ್ಪಿಸಿ. ಆದರೆ ಎಲ್ಲೂ ಇದರ ಬಗ್ಗೆ ಬಾಯ್ಬಿಡಬೇಡಿ ಎಂದು ದಕ್ಷಿಣ ವಿಭಾಗದ ಡಿಸಿಪಿ, ಸಜ್ಜನ ರೇವಣ್ಣ ಅವರು ತಾಕೀತು ಮಾಡಿದ್ದಾರೆ. ಅಷ್ಟೂ ಚಿಕಿತ್ಸೆಯ ವಿವರ ತಮ್ಮ ಕೈಸೇರುತ್ತಿದ್ದಂತೆ ರೇವಣ್ಣ ಅವರು ಅದನ್ನೆಲ್ಲಾ ಸೂಕ್ತವಾಗಿ ಪರಿಶೀಲಿಸಿ ವರದಿ ನೀಡುವಂತೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕರಿಗೆ ಕಳುಹಿಸಿಕೊಟ್ಟಿದ್ದಾರೆ.

ಕಿದ್ವಾಯಿ ವರದಿ ಪೊಲೀಸರನ್ನು ಬೆಚ್ಚಿಬೀಳಿಸಿತು:
ಕಿದ್ವಾಯಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಬಿಲ್ಲುಗಳನ್ನು ಮತ್ತು ಚಿಕಿತ್ಸೆಯ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಕೆ ಆರ್ .ಆಸ್ಪತ್ರೆಯವರು ನಕಲಿ ಮತ್ತು ಸುಳ್ಳು ಮಾಹಿತಿ ದಾಖಲಿಸಿರುವುದನ್ನು ದೃಢೀಕರಿಸಿ ತಮ್ಮ ವರದಿ ನೀಡಿದ್ದಾರೆ. ಬೆಟ್ಟೇಗೌಡರಿಗೆ ಇರುವುದು ರಕ್ತ ಕ್ಯಾನ್ಸರ್. ಕೆಆರ್ ಆಸ್ಪತ್ರೆ ವೈದ್ಯರು 'ಇಮಲೆಕ್' ಮತ್ತು '400 ಎಂಜಿ' ಮಾತ್ರೆಗಳನ್ನು ನೀಡಿದ್ದಾರೆ. ಆದರೆ, ಆರೋಗ್ಯ ಭಾಗ್ಯ ಟ್ರಸ್ಟಿನಿಂದ ಹಣ ಪಡೆಯಲು (ಲಪಟಾಯಿಸಲು) ಬಿಲ್ಲುಗಳನ್ನು ಪಾವತಿಸುವ ವೇಳೆ ಸ್ತನ ಕ್ಯಾನ್ಸರಿಗೆ ನೀಡುವ 'ಅಸೆಪ್ಟನ್' ಇಂಜೆಕ್ಷನ್ ನೀಡುವುದಾಗಿ ನಕಲಿ ದಾಖಲಾತಿ ಸೃಷ್ಟಿಸಿದ್ದಾರೆ ಎಂದು ಅನುಮಾನಕ್ಕೆ ಎಡೆಯಿಲ್ಲದಂತೆ ಷರಾ ಬರೆದು ಮಹತ್ವದ ವರದಿ ಒಪ್ಪಿಸಿದ್ದಾರೆ.

ಹನುಮಂತನಗರ ಠಾಣೆಯಲ್ಲಿ ದೂರು ದಾಖಲು ಶಾಸ್ತ್ರ
ಪೊಲೀಸರಿಗೆ ಅಷ್ಟು ಸಾಕಾಗಿತ್ತು ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಆರೋಗ್ಯ ಭಾಗ್ಯ ಯೋಜನೆಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 2ನೇ ದರ್ಜೆಯ ನೌಕರ ನರೇಶ್ ಕುಮಾರ್ ಅವರ ಕೈಯಲ್ಲಿ ಕಳೆದ ಗುರುವಾರ ಹನುಮಂತನಗರ ಠಾಣೆಯಲ್ಲಿ ದೂರು ದಾಖಲಿಸಿಸುವ ಶಾಸ್ತ್ರ ಮಾಡಿಕೊಂಡಿದ್ದಾರೆ.

ಮೇಲಿಂದ ಅಶ್ವಿನಿ ದೇವತೆಗಳು ತಥಾಸ್ತು
ಅದಾಗುತ್ತಿದ್ದಂತೆ ಶುಕ್ರವಾರ ಸೀದಾ ಕೆಆರ್ ಆಸ್ಪತ್ರೆಗೆ ನುಗ್ಗಿದವರೆ ಕರ್ತವ್ಯದಲ್ಲಿದ್ದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಹರಿಪ್ರಸಾದ್ ಮತ್ತು ಆಡಳಿತಾಧಿಕಾರಿ ಮಹೇಶನನ್ನು 'ವಸಿ ಸ್ಟೇಷನ್ನಿಗೆ ಬನ್ರಪ್ಪಾ. ನಿಮ್ಮಂತಹವರಿಗೆ ನಮ್ಮ ಟ್ರೀಟ್ ಮೆಂಟ್ ಜರೂರತ್ತು ಬಹಳಷ್ಟಿದೆ. ಆಮೇಲೆ ಮಾವನ ಮನೆಯಲ್ಲಿ ಸ್ವಲ್ಪ ರೆಸ್ಟ್ ತಗೋಳೀವಿರಂತೆ' ಎಂದು ಡಿಸಿಪಿ ರೇವಣ್ಣ ಸಿಬ್ಬಂದಿ ಖದೀಮರ ಹೆಗಲ ಮೇಲೆ ಕೈಹಾಕಿದಾಗ ಸ್ವತಃ ತಮಗೇ ಕ್ಯಾನ್ಸರ್ ಅಟಕಾಯಿಸಿಕೊಂಡಂತಾಗಿದೆ ವೈದ್ಯ ಜೋಡಿಗೆ! ಅತ್ತ ಅಶ್ವಿನಿ ದೇವತೆಗಳು ಮೇಲಿಂದ ತಥಾಸ್ತು ಅಂದಿದ್ದಾರೆ.












Click it and Unblock the Notifications