ಬೀದರ್ ನಿಂದ ಬೆಂಗಳೂರಿಗೆ ನೇರ ರೈಲು

ಬೀದರ್ ರೈಲು ನಿಲ್ದಾಣದಲ್ಲಿ ಭಾನುವಾರ ಕೇಂದ್ರ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ, ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಬೀದರ್ ಬೆಂಗಳೂರು ನೇರ ರೈಲು ಸಂಪರ್ಕದಿಂದ ಉತ್ತರ ಕರ್ನಾಟಕ ಭಾಗದ ನಿಜವಾದ ಏಕೀಕರಣವಾಗಿದೆ ಎಂದು ಬಣ್ಣಿಸಿದರು.
ಹೊಸ ರೈಲು ಆರಂಭದಿಂದಾಗಿ ರಾಜಧಾನಿಗೆ ಹೋಗಬೇಕಾದ ಜನರು, ನಾಂದೇಡ್-ಬೆಂಗಳೂರು ಎಕ್ಸ್‌ಪ್ರೆಸ್ ಅಥವಾ ಗುಲ್ಬರ್ಗ-ಬೆಂಗಳೂರು ರೈಲು ಅವಲಂಬಿಸುವುದು ತಪ್ಪಿದಂತಾಗಿದೆ. ಇಲ್ಲಿನ ಜನರ ಬಹು ದಿನದ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಖರ್ಗೆ ಹೇಳಿದರು.
ವಾರದಲ್ಲಿ 3 ದಿನ ಸಂಚಾರ : ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೀದರ್ ನಿಂದ ಸಂಜೆ 6:25ಕ್ಕೆ ಹೊರಡುವ ರೈಲು (ಸಂಖ್ಯೆ 16572) ಮರುದಿನ ಬೆಳಗ್ಗೆ 7:40ಕ್ಕೆ ಯಶವಂತಪುರ ತಲುಪಲಿದೆ.
ಭಾನುವಾರ, ಮಂಗಳವಾರ ಮತ್ತು ಗುರುವಾರ ಯಶವಂತಪುರದಿಂದ ಸಂಜೆ 7:15ಕ್ಕೆ ಹೊರಡುವ ರೈಲು (ಸಂಖ್ಯೆ 16571) ಮರುದಿನ ಬೆಳಗ್ಗೆ 9:30ಕ್ಕೆ ಬೀದರ್ ಗೆ ತಲುಪಲಿದೆ.
ಪ್ರಯಾಣದ ದರ : ಬೀದರ್ - ಯಶವಂತಪುರ ರೈಲು ಪ್ರಯಾಣಕ್ಕೆ ಸ್ಲೀಪರ್ ಕ್ಲಾಸ್ ಗೆ 330 ರೂ. ದರ ನಿಗದಿಗೊಳಿಸಲಾಗಿದೆ. 1-ಎಸಿ ತ್ರಿ ಟಯರ್ ಗೆ 885, 1-ಎಸಿ ಟು ಟಯರ್ ಗೆ 01,305 ಮತ್ತು 1-ಎಸಿ ಒನ್ ಕಂ 2,165 ರೂ. ದರವಿದೆ. ಜನರಲ್ ಸೆಕೆಂಡ್ ಕ್ಲಾಸ್ ನಲ್ಲಿ ಪ್ರಯಾಣಿಸಲು 175ರೂ. ದರ ನಿಗದಿ ಮಾಡಲಾಗಿದೆ.
ಚಿಕ್ಕಮಗಳೂರಿಗೆ ಆದ್ಯತೆ : ನಮ್ಮ ಮುಂದಿನ ಆದ್ಯತೆ ಚಿಕ್ಕಮಗಳೂರು ಜಿಲ್ಲೆಯಾಗಿದೆ. ಚಿಕ್ಕಮಗಳೂರು - ಹಾಸನ ಮಾರ್ಗದ ಕೆಲಸ ಕೈಗೆತ್ತಿಕೊಳ್ಳಲಾಗಿದ್ದು, ಸುರಕ್ಷಾ ವಿಭಾಗದ ನಿರ್ದೇಶಕರಿಂದ ಅನುಮತಿ ದೊರೆತರೆ, 20 ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಖರ್ಗೆ ತಿಳಿಸಿದರು.
ಮೈಸೂರಿನಿಂದ ಕುಶಾಲನಗರವರೆಗೆ ಹೊಸ ರೈಲ್ವೆ ಮಾರ್ಗ ನಿರ್ಮಿಸಲು ಯೋಜನೆ ಸಿದ್ದಪಡಿಸಲಾಗಿದೆ. ಇದಕ್ಕೆ ಅಗತ್ಯವಿರುವ ಭೂ ಸ್ವಾಧೀನಕ್ಕಾಗಿ ಯೋಜನಾ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ಈ ಯೋಜನೆ ಮೂಲಕ ಕೊಡಗು ಜಿಲ್ಲೆಗೂ ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದರು.












Click it and Unblock the Notifications