ಮಹಾನಗರ ಪಾಲಿಕೆಗಳ ಮೀಸಲಾತಿ ಘೋಷಣೆ

2013ರ ಮಾರ್ಚ್ ತಿಂಗಳಿನಲ್ಲಿ ಬಿಬಿಎಂಪಿ ಹೊರತುಪಡಿಸಿ ಅವಧಿ ಪೂರ್ಣಗೊಂಡಿದ್ದ ರಾಜ್ಯದ ಏಳು ನಗರಪಾಲಿಕೆಗಳು ಸೇರಿದಂತೆ 208 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು.
ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದರೂ ಮೇಯರ್ ಮತ್ತು ಉಪ ಮೇಯರ್ ಮೀಸಲಾತಿ ಕಲ್ಪಿಸಿ ಸರ್ಕಾರ ಅಧಿಸೂಚನೆ ಹೊರಡಿಸಿರಲಿಲ್ಲ.
ಗುರುವಾರ ಬಿಬಿಎಂಪಿ ಸೇರಿದಂತೆ ಎಂಟು ಮಹಾ ನಗರಪಾಲಿಕೆಗಳ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಎದುರಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ವಿರೋಧ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು.
ಆದರೆ, ಅವಧಿ ಪೂರ್ಣಗೊಂಡ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತೇವೆ ಎಂಬ ಚುನಾವಣಾ ಆಯೋಗದ ಧೃಡ ನಿರ್ಧಾರದಿಂದಾಗಿ ಚುನಾವಣೆ ನಡೆದಿತ್ತು. ನಂತರ, ವಿಧಾನಸಭೆ ಚುನಾವಣೆ ಘೋಷಣೆಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ರಚನೆಗೊಂಡರೂ, ಮೂರುವರೆ ತಿಂಗಳಿಂದ ಮೀಸಲು ನಿಗದಿ ವಿಚಾರ ನೆನೆಗುದಿಗೆ ಬಿದ್ದಿತ್ತು.
ಬೆಂಗಳೂರು ಮಹಾನಗರ ಪಾಲಿಕೆಯ ಮೀಸಲಾತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಬಿಬಿಎಂಪಿಯ ಮೇಯರ್- ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಕಲ್ಪಿಸಿರುವ ನಗರಾಭಿವೃದ್ಧಿ ಇಲಾಖೆ, ಅದರ ಜತೆಗೆ ರಾಜ್ಯದ ಏಳು ಮಹಾ ನಗರಪಾಲಿಕೆಗಳಿಗೂ ಮೀಸಲಾತಿ ಪ್ರಕಟಿಸಿದೆ.
ಆದರೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿಯನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸುವಲ್ಲಿ ಸರ್ಕಾರ ಇನ್ನೂ ವಿಳಂಬ ನೀತಿ ಅನುಸರಿಸುತ್ತಿದೆ.
ರಾಜ್ಯದ ಎಂಟು ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳ ಮೀಸಲು ಪಟ್ಟಿ:
| ಪಾಲಿಕೆ | ಮೇಯರ್ | ಉಪ ಮೇಯರ್ |
| ಬಿಬಿಎಂಪಿ | ಸಾಮಾನ್ಯ | ಸಾಮಾನ್ಯ ಮಹಿಳೆ |
| ಬೆಳಗಾವಿ | ಹಿಂದುಳಿದ ವರ್ಗ (ಎ) | ಸಾಮಾನ್ಯ ಮಹಿಳೆ |
| ಬಳ್ಳಾರಿ | ಪರಿಶಿಷ್ಟ ಜಾತಿ | ಹಿಂದುಳಿದ ವರ್ಗ (ಬಿ) ಮಹಿಳೆ |
| ದಾವಣಗೆರೆ | ಪರಿಶಿಷ್ಟ ಜಾತಿ ಮಹಿಳೆ | ಹಿಂದುಳಿದ ವರ್ಗ (ಎ) |
| ಗುಲ್ಬರ್ಗಾ | ಹಿಂದುಳಿದ ವರ್ಗ (ಎ) ಮಹಿಳೆ | ಸಾಮಾನ್ಯ |
| ಹುಬ್ಬಳ್ಳಿ-ಧಾರವಾಡ | ಸಾಮಾನ್ಯ | ಪರಿಶಿಷ್ಟ ವರ್ಗ ಮಹಿಳೆ |
| ಮೈಸೂರು | ಸಾಮಾನ್ಯ ಮಹಿಳೆ | ಪರಿಶಿಷ್ಟ ಜಾತಿ |
| ಮಂಗಳೂರು | ಸಾಮಾನ್ಯ ಮಹಿಳೆ | ಸಾಮಾನ್ಯ |












Click it and Unblock the Notifications