ಪರಿಷತ್ ಚುನಾವಣೆಯಲ್ಲಿ ಶೇ 99ರಷ್ಟು ಮತದಾನ

ಗುರುವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗ ಮತದಾನ ಸಂಜೆ 4 ಗಂಟೆ ವರಗೆ ಶಾಂತಿಯುತವಾಗಿ ನಡೆಯಿತು. ಆಯಾ ಕ್ಷೇತ್ರಗಳ ಸಂಸದರು, ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು, ನಗರ ಸ್ಥಳೀಯ ಸಂಸ್ಥೆ ಸದಸ್ಯರು, ಜಿ.ಪಂ., ತಾ.ಪಂ, ಗ್ರಾ.ಪಂ. ಸದಸ್ಯರು ಮತ ಚಲಾಯಿಸಿದರು.
ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಶೇ.98.21, ಅವಿಭಜಿತ ಧಾರವಾಡ ಜಿಲ್ಲಾ ಮತಕ್ಷೇತ್ರದಲ್ಲಿ ಶೇ.99.59 ಹಾಗೂ ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದಲ್ಲಿ ಶೇ.99.66 ರಷ್ಟು ಮತದಾನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದರೆ. ಆ.26ರಂದು ಮತಗಳ ಎಣಿಕೆ ನಡೆಯಲಿದೆ.
ಶಾಂತಿಯುತ ಮತದಾನ : ಮತದಾರರ ಪಟ್ಟಿಯಲ್ಲಿ ಗೊಂದಲ ಸೇರಿದಂತೆ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಮತದಾನ ಬಹುತೇಕ ಶಾಂತಿಯುತವಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರಾಜಕೀಯ ನಾಯಕರ ಮತದಾನ : ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹುಬ್ಬಳ್ಳಿಯಲ್ಲಿ, ಮಾಜಿ ಸಚಿವ ಬೊಮ್ಮಾಯಿ ಹಾವೇರಿಯಲ್ಲಿ, ಸಂಸದ ಎಚ್. ವಿಶ್ವನಾಥ್ ಮತ್ತು ಎಂಎಲ್‌ಸಿ ಗೋ.ಮಧುಸೂದನ್ ಮೈಸೂರಿನಲ್ಲಿ ಮತದಾನ ಮಾಡಿದರು.
ಸಚಿವ ಎಚ್.ಎಸ್. ಮಹದೇವಪ್ರಸಾದ್ ಚಾಮರಾಜನಗರದಲ್ಲಿ ಮತ ಚಲಾಯಿಸಿದರು. ಮೈಸೂರಿನ ಮತಗಟ್ಟೆ ಸಂಖ್ಯೆ 100ರಲ್ಲಿ ಸಿಎಂ ಸಿದ್ದರಾಮಯ್ಯ ಮತ ಚಲಾವಣೆ ಮಾಡಬೇಕಾಗಿತ್ತು. ಆದರೆ, ಅವರು ಬೆಂಗಳೂರಿನಲ್ಲಿದ್ದು ಮತದಾನ ಮಾಡಲಿಲ್ಲ.
ಕಾಂಗ್ರೆಸ್ ಗೆ ದೊಡ್ಡ ಸವಾಲು : ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಪಕ್ಷಗಳನ್ನು ಎದುರಿಸುತ್ತಿದೆ. ಕಾಂಗ್ರೆಸ್ ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಧಾರವಾಡ ಹಾಗೂ ಚಿತ್ರದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದು, ಕೆಜೆಪಿ ಬೆಂಬಲ ನೀಡಿದೆ.
ಮೈಸೂರಿನಲ್ಲಿ ಕೆಜೆಪಿ ಅಭ್ಯರ್ಥಿ ಕಣದಲ್ಲಿದ್ದು, ಬಿಜೆಪಿ ಬೆಂಬಲ ಘೋಷಿಸಿದೆ. ಪ್ರತಿಪಕ್ಷ ಜೆಡಿಎಸ್ ಈ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಿಜೆಪಿ ಹಾಗೂ ಕೆಜೆಪಿಗೆ ಪರೋಕ್ಷ ಬೆಂಬಲ ಘೋಷಿಸಿದೆ.
ಧಾರವಾಡದಲ್ಲಿ ಮಾಜಿ ಸಿಎಂ ಶೆಟ್ಟರ್ ಸಹೋದರ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಹಾಗೂ ಕಾಂಗ್ರೆಸ್‌ನ ನಾಗರಾಜ್ ಛಬ್ಬಿ ನಡುವೆ, ಚಿತ್ರದುರ್ಗದಲ್ಲಿ ಬಿಜೆಪಿಯ ನವೀನ್ ಹಾಗೂ ಕಾಂಗ್ರೆಸ್‌ನ ಎಂ.ಎ.ಸೇತೂರಾಮ್ ನಡುವೆ ನೇರಹಣಾಹಣಿ ಏರ್ಪಟ್ಟಿದೆ.
ಸಿಎಂ ಸಿದ್ದರಾಮಯ್ಯ ತವರು ಕೇತ್ರ ಮೈಸೂರಿನಲ್ಲಿ ಕೆಜೆಪಿಯ ಶೇಖರ್ ಹಾಗೂ ಕಾಂಗ್ರೆಸ್‌ನ ಆರ್. ಧರ್ಮಸೇನ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ, ಕೆಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದೆ.












Click it and Unblock the Notifications