ನೀರಸ ಮತದಾನ, ಫಲಿತಾಂಶದತ್ತ ಚಿತ್ತ
ಬೆಂಗಳೂರು, ಆ.22 : ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಭಯ ಕ್ಷೇತ್ರಗಳಿಂದ ಒಟ್ಟಾರೆ 54.72 ರಷ್ಟು ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕಿಂತ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಮತದಾನವಾಗಿದೆ. ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ, ಮತದಾ ಶಾಂತಿಯುತವಾಗಿ ನಡೆದಿದ್ದು, ಆ.24ರ ಶನಿವಾರ ನಡೆಯಲಿರುವ ಮತ ಎಣಿಕೆ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಮಂಡ್ಯ ಜಿಲ್ಲೆಯಲ್ಲಿ ಶೇ.58.51ರಷ್ಟು ಮತದಾನವಾಗಿದೆ. 2009ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕ್ಷೇತ್ರದಲ್ಲಿ ಶೇ. 10.28ರಷ್ಟು ಕಡಿಮೆ ಮತದಾನ ನಡೆದಿದೆ. ಆಯ್ಕೆಯಾದ ಅಭ್ಯರ್ಥಿಗಳ ಅವಧಿ ಎಂಟು ತಿಂಗಳು ಮಾತ್ರವಿರುವುದರಿಂದ ಜನರು ಮತದಾನದ ಬಗ್ಗೆ ಆಸಕ್ತಿ ತೋರಿಸಿಲ್ಲ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ.50.93 ರಷ್ಟು ಮತದಾನ ನಡೆದಿದೆ. 2009ರ ಚುನಾವಣೆಗೆ ಹೋಲಿಕೆ ಮಾಡಿದರೆ, ಶೇ.6.99 ರಷ್ಟು ಕಡಿಮೆ ಮತದಾನವಾಗಿದೆ. ಎರಡೂ ಕ್ಷೇತ್ರಗಳ ಮತದಾರರು ಉಪ ಚುನಾವಣೆ ನಮಗೆ ಬೇಡವಾಗಿತ್ತು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಶಾಂತಿಯುತ ಮತದಾನ : ಉಭಯ ಕ್ಷೇತ್ರಗಳಲ್ಲೂ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತದಾನ ಬಹಿಷ್ಕಾರ, ಕೆಲವೆಡೆ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿ ಬಿಟ್ಟರೆ, ಶಾಂತಿಯುತವಾಗಿ ಮತದಾನ ನಡೆದಿದೆ.
ಕಡಿಮೆ ಮತದಾನ : ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕನಕಪುರ, ಚನ್ನಪಟ್ಟಣ, ರಾಮನಗರ, ಮಾಗಡಿ, ಕುಣಿಗಲ್ ಕ್ಷೇತ್ರಗಳಲ್ಲಿ ಹೆಚ್ಚು ಮತದಾನವಾಗಿದ್ದರೆ, ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಬೆಂಗಳೂರು ದಕ್ಷಿಣ, ಆನೇಕಲ್ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಕಡಿಮೆ ಮತದಾನವಾಗಿದೆ.
ಮಾತಿನ ಚಕಮಕಿ : ಮತದಾರರನ್ನು ಮತಗಟ್ಟೆಗೆ ಕರೆ ತರುವ ಸಂಬಂಧ ರಾಮನಗರ ತಾಲೂಕಿನ ಕಾಕರಾಮನಹಳ್ಳಿ, ಕನಕಪುರದ ಚನ್ನಬಸಪ್ಪ ವೃತ್ತದ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು.
ಮಂಡ್ಯ ತಾಲೂಕಿನ ಬಿಳಿಗುಲಿ, ಶ್ರೀರಂಗಪಟ್ಟಣ ತಾಲೂಕಿನ ಆಲುಗೂಡು, ಗಂಜಾಂ, ಬೆಳಗೋಳ, ಅಬ್ಬೂರು ಹಾಗೂ ಮಳವಳ್ಳಿ ತಾಲೂಕಿನ ಕೊನ್ನಾಪುರಗಳಲ್ಲಿ ಮತಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚುಕಾಲ ಮತದಾನ ಸ್ಥಗಿತಗೊಂಡಿತ್ತು.
ರಮ್ಯಾಗೆ ಮತದಾನದವಿಲ್ಲ : "ನಾನು ಮಂಡ್ಯದವಳು, ಗೋಪಾಲಪುರದ ಜಿ.ಎಸ್. ಬೋರೇಗೌಡರ ಮೊಮ್ಮಗಳು' ಎಂದು ಪ್ರಚಾರದಲ್ಲಿ ಹೇಳಿಕೊಂಡಿದ್ದ ರಮ್ಯಾಗೆ ಮಂಡ್ಯದಲ್ಲಿ ಮತದಾನ ಮಾಡುವ ಅವಕಾಶ ಸಿಗಲಿಲ್ಲ.
ರಮ್ಯಾ ಬೆಂಗಳೂರಿನ ನಿವಾಸಿಯಾಗಿದ್ದು, ಮಂಡ್ಯ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಆದ್ದರಿಂದ, ತಾವು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ತಮ್ಮ ಮತವನ್ನು ತಾವೇ ಹಾಕಿಕೊಳ್ಳಲು ಅವರಿಗೆ ಅವಕಾಶ ದೊರೆಯಲಿಲ್ಲ.












Click it and Unblock the Notifications