ಸ್ವಾತಂತ್ರ್ಯ ಸಂಭ್ರಮಾಚರಣೆ: ರಾಜಧಾನಿಯಲ್ಲಿ ಕಟ್ಟೆಚ್ಚರ
ಬೆಂಗಳೂರು, ಆಗಸ್ಟ್ 14: ನಾಳೆ ಇಡೀ ದೇಶಕ್ಕೆ 67ನೇಯ ಸಂಭ್ರಮದ ಸ್ವಾತಂತ್ರ್ಯಾಚರಣೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಭಯೋತ್ಪಾದನೆ ಸಂಚಿನ ಬಗ್ಗೆ ಕೇಂದ್ರ ಗುಪ್ತಚರ ದಳದಿಂದ ನಿರ್ದಿಷ್ಟ ಸಂದೇಶವೇನೂ ಬಂದಿಲ್ಲ. ಆದರೂ ಮುನ್ನೆಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸೌಧ, ಹೈಕೋರ್ಟ್, ಬೆಂಗಳೂರು ವಿಮಾನ ನಿಲ್ದಾಣ, ಮೆಜಿಸ್ಟಿಕ್ ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣಗಳಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಇದಲ್ಲದೆ ರಾಜ್ಯದ ಇತರೆ ಭಾಗಗಳಲ್ಲೂ ಬಿಗಿ ಭದ್ರತೆ ಹಾಕಲಾಗಿದೆ. ಅದರಲ್ಲೂ ತುಂಬಿಹರಿಯುತ್ತಿರುವ ಜಲಾಶಗಳ ಸುತ್ತಮುತ್ತ ವಿಶೇಷ ಭದ್ರತೆ ಹಾಕಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಪಾಲಿಸಲು ಸೂಚಿಸಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ತಿಳಿಸಿದ್ದಾರೆ.

ಇನ್ನು, ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ನಾಳೆ ಗುರುವಾರ ಬೆಳಗ್ಗೆ 9ಕ್ಕೆ ನಡೆಯುವ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮೈದಾನದ ಒಳಗೆ ಹಾಗೂ ಸುತ್ತಮುತ್ತ ಸೂಕ್ತ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಭದ್ರತೆಗಾಗಿ 1200 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮೂವರು ಜಂಟಿ ಆಯುಕ್ತರು, 9 ಡಿಸಿಪಿಗಳಿಗೆ ಭದ್ರತೆ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೇ, ಮೈದಾನದ ಸುತ್ತ 40 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಹಳದಿ ಕಾರ್ ಪಾಸ್ ಆಹ್ವಾನಿತರು ಪ್ರವೇಶದ್ವಾರ-1 ರ ಮೂಲಕ ಪರೇಡ್ ಮೈದಾನಕ್ಕೆ ಪ್ರವೇಶಿಸಿ ಪಶ್ಚಿಮ ಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು. ಬಿಳಿ ಕಾರ್ ಪಾಸ್ ಹೊಂದಿರುವ ಗಣ್ಯರು, ಸಚಿವರು, ಸರಕಾರದ ಕಾರ್ಯದರ್ಶಿ, ಮಿಲಿಟರಿ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಪ್ರವೇಶದ್ವಾರ-2ರ ಮೂಲಕ ಪ್ರವೇಶಿಸಿ ಅವರ ವಾಹನಗಳನ್ನು ಪರೇಡ್ ಮೈದಾನದ ಈಶಾನ್ಯ ಭಾಗದಲ್ಲಿ ನಿಲುಗಡೆ ಮಾಡಬಹುದು.
ಪಿಂಕ್ ಪಾಸ್‌ಗಳನ್ನು ಹೊಂದಿರುವ ಆಹ್ವಾನಿತರು ವಾಹನಗಳನ್ನು ಎಂಜಿ ರಸ್ತೆ ಮೂಲಕ ಪ್ರವೇಶಿಸಿ, ಬಿಆರ್ ಬಿ ಪೊಲೀಸ್ ಪರೇಡ್ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬೇಕು. ನಂತರ ಅವರು ಪ್ರವೇಶದ್ವಾರ-3ರ ಮೂಲಕ ಒಳಗೆ ಪ್ರವೇಶಿಸಬೇಕು.
ಹಸಿರು ಬಣ್ಣದ ಪಾಸ್ ಹೊಂದಿರುವವರು ಕಾಮರಾಜ ರಸ್ತೆ ಹಾಗೂ ಮೈನ್ ಗಾರ್ಡ್ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿ, ನಂತರ ಪ್ರವೇಶದ್ವಾರ- 4 ಮತ್ತು 5ರ ಮೂಲಕ ಒಳಗೆ ಬರಬಹುದು.
ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳು ಪ್ರವೇಶದ್ವಾರ -1ರ ಬಳಿ ನಿಲ್ಲಿಸಿ ಮಕ್ಕಳನ್ನು ಇಳಿಸಿ ನಂತರ ತಮ್ಮ ವಾಹನಗಳನ್ನು ಬಿಆರ್ ವಿ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬೇಕು.
ಪಿಡಬ್ಲ್ಯೂಡಿ, ಬಿಬಿಎಂಪಿ ಮತ್ತಿತರ ಸರಕಾರಿ ವಾಹನಗಳು ಪ್ರವೇಶದ್ವಾರ-1 ಮೂಲಕ ಮೈದಾನ ಪ್ರವೇಶಿಸಿ, ನಂತರ ಪೋರ್ಟ್ ವಾಲ್ ಹಿಂಬದಿಯಲ್ಲಿ (ದಕ್ಷಿಣದ ಕಡೆಗೆ) ನಿಲುಗಡೆ ಮಾಡಬಹುದು. ದ್ವಿಚಕ್ರವಾಹನ ಸವಾರರು ಹಾಗೂ ಕಾರ್ ಪಾಸುಗಳಿಲ್ಲದಿರುವವರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆಯಲ್ಲಿ ನಿಲುಗಡೆ ಮಾಡಬೇಕು. ನಂತರ ಪ್ರವೇಶದ್ವಾರ -4 ಮತ್ತು 5ರ ಮೂಲಕ ಒಳಗೆ ಬರಬೇಕು.
ವಾಹನ ನಿಲುಗಡೆ ಎಲ್ಲಿ?
ದ್ವಿಚಕ್ರವಾಹನ ಮತ್ತು ಕಾರುಗಳಲ್ಲಿ ಕಾರ್ಯಕ್ರಮಕ್ಕೆ ಬರುವವರು ತಮ್ಮ ವಾಹನಗಳನ್ನು ಸಫೀನಾ ಪ್ಲಾಜಾ ಮುಂಭಾಗ ಮತ್ತು ಶಿವಾಜಿನಗರ ಬಿಎಂಟಿಸಿ ಸಂಕೀರ್ಣದ 2ನೇ ಮಹಡಿಯಲ್ಲಿ, ಶಿವಾಜಿನಗರದ ಛೋಟಾ ಮೈದಾನ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ನಿಲುಗಡೆ ಮಾಡಬಹುದು.
ಬಿಎಂಟಿಸಿ ಬಸ್ ನಿಲುಗಡೆ
ಎಂಜಿ ರಸ್ತೆಯಲ್ಲಿ, ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೊ ನಿಲ್ದಾಣದವರೆಗೆ ಬಿಎಂಟಿಸಿ ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಸಂಚಾರ ನಿರ್ಬಂಧ
ಆಗಸ್ಟ್ 15ರಂದು ಬೆಳಗ್ಗೆ 8.30ರಿಂದ ಬೆಳಗ್ಗೆ 10.30ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿಆರ್ ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್ ವರೆಗೆ ಎರಡೂ ದಿಕ್ಕೂಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಏನೇನು ತರುವಂತಿಲ್ಲ:
ಪರೇಡ್ ಮೈದಾನಕ್ಕೆ ಬರುವ ಆಹ್ವಾನಿತರು ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್ ಫೋನುಗಳನ್ನು ತರುವಂತಿಲ್ಲ. ಹೆಲ್ಮೆಟ್, ಕ್ಯಾಮೆರಾ, ಛತ್ರಿ, ರೇಡಿಯೊ, ಬೆಂಕಿ ಪೊಟ್ಟಣ, ಬೀಡಿ, ಸಿಗರೇಟು ಮತ್ತಿತರ ವಸ್ತುಗಳನ್ನು ನಿಷೇಧಿಸಲಾಗಿದೆ. ಎಲ್ಲರೂ ಬೆಳಗ್ಗೆ 8.30ರ ಒಳಗೆ ಆಸೀನರಾಗುವಂತೆ ಕೋರಲಾಗಿದೆ.
ಭದ್ರತಾ ತಪಾಸಣೆ
ಕಾರ್ಯಕ್ರಮ ವೀಕ್ಷಣೆಗೆ ಬರುವ ಪ್ರತಿಯೊಬ್ಬರೂ ಭದ್ರತಾ ದೃಷ್ಟಿಯಿಂದ ಪೊಲೀಸರ ತಪಾಸಣೆಗೆ ಸಹಕರಿಸಲು ಕೋರಲಾಗಿದೆ.
ಗೇಟ್ ನಂ.1, 2, 3 ಮತ್ತು 4ರಲ್ಲಿ ಪಾಸ್ ಇದ್ದವರಿಗೆ ಮಾತ್ರ ಪ್ರವೇಶವಿದ್ದು, ಪ್ರತಿ ಪಾಸ್ ಗೆ ಇಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ. ಈ ಗೇಟ್ ಗಳಲ್ಲಿ ಪ್ರವೇಶಿಸುವವರು ಕಡ್ಡಾಯವಾಗಿ ಪಾಸ್ ತರಬೇಕು.
ಗೇಟ್ ನಂ. 5ರಲ್ಲಿ ಸಾರ್ವಜನಿಕರಿಗೆ ಪ್ರವೇಶವಿದ್ದು, ಈ ಗೇಟಿನ ಮೂಲಕ ಪ್ರವೇಶಿಸುವವರಿಗೆ ಪಾಸ್ ಅವಶ್ಯಕತೆ ಇರುವುದಿಲ್ಲ. ವಾಹನಗಳನ್ನು ಸೂಚಿಸಿದ ಸ್ಥಳಗಳಲ್ಲೇ ನಿಲುಗಡೆ ಮಾಡಬೇಕು.












Click it and Unblock the Notifications