ಮೈಸೂರು : ಮಾಧವಮಂತ್ರಿ ಡ್ಯಾಂ ದುರಸ್ಥಿ ಪ್ರಾರಂಭ

ಕಳೆದ ಗುರುವಾರ ಮಾಧವಮಂತ್ರಿ ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದರಿಂದ ನೀರು ಹರಿದು ಹೋಗುತ್ತಿದ್ದರೂ, ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಶುಕ್ರವಾರ 60 ಮೀ. ನಷ್ಟು ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು.
ಸಂಸದ ಆರ್. ಧ್ರುವನಾರಾಯಣ ಅವರು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್ ಅವರ ಜೊತೆ ಒಡೆದು ಹೋಗಿದ್ದ ಅಣೆಕಟ್ಟೆಯನ್ನು ಪರಿಶೀಲಿಸಿದ್ದರು. ಅಲ್ಲದೆ, ಜಲಸಂಪನ್ಮೂಲ ಸಚಿವರಿಗೆ ಅಣೆಕಟ್ಟು ಉಳಿಸುವಂತೆ ಮನವಿ ಮಾಡಿದ್ದರು.
ಮಾಧವ ಮಂತ್ರಿ ಅಣೆಕಟ್ಟೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ, ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗದಂತೆ ನಾಲೆಗೆ ನೀರು ಹರಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭರವಸೆ ನೀಡಿದ್ದರು.
ಸೋಮವಾರ ಮಾಧವ ಮಂತ್ರಿ ಅಣೆಕಟ್ಟೆಯ ವಾಸ್ತವತೆಯನ್ನು ಖುದ್ಧಾಗಿ ಅರಿಯಲು ಮೂವರು ತಂತ್ರಜ್ಞರ ತಂಡದೊಂದಿಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಂಡ ತಲಕಾಡಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದರು.
ನಂತರ ಸರ್ಕಾರ ಎಲ್ ಅಂಡ್ ಟಿ ಕಂಪನಿಗೆ ಅಣೆಕಟ್ಟು ದುರಸ್ತಿ ಕಾರ್ಯವನ್ನು ವಹಿಸಿಕೊಳ್ಳುವಂತೆ ಸೂಚಿಸಿತ್ತು. ಬುಧವಾರ ಕಂಪನಿ ಕಾಮಗಾರಿ ಪ್ರಾರಂಭಿಸಿದೆ. ಅಣೆಕಟ್ಟಿನ ಮುಂಭಾಗದ ಹಳ್ಳದಲ್ಲಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನು ಒಡೆದು ಹೋಗ ಜಾಗಕ್ಕೆ ತುಂಬಿ ದುರಸ್ತಿ ಮಾಡಲಾಗುತ್ತಿದೆ.
ಕಾಡು ಕಲ್ಲು ಬಳಸಿ ಕಟ್ಟಿದ್ದರು : ತಲಕಾಡು ಭಾಗದ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಜನರಿಗೆ ಅನುಕೂಲ ಮಾಡಿಕೊಡಲು ಕಾವೇರಿ ನದಿಗೆ ಹೆಮ್ಮಿಗೆ ಗ್ರಾಮದಲ್ಲಿ ಮಾಧವಮಂತ್ರಿ ಅಣೆಕಟ್ಟೆಯನ್ನು ಕಟ್ಟಿದ್ದರು.
ಮೈಸೂರು ಸಂಸ್ಥಾನದಲ್ಲಿ ಮಂತ್ರಿಗಳಾಗಿದ್ದ ಮಾಧವಮಂತ್ರಿ ಅವರು ಹೆಚ್ಚಿನ ಆಸಕ್ತಿಯನ್ನು ವಹಿಸಿ, ಕಾಡುಗಲ್ಲುಗಳಿಂದ ನದಿಯ ಹರಿವಿನ ಪಾತ್ರಕ್ಕೆ ತದ್ವಿರುದ್ಧವಾಗಿ ಗಾರೆಯಿಂದ ಕಟ್ಟಿಸಿದ್ದರು. ಆದ್ದರಿಂದ ಅಣೆಕಟ್ಟೆಗೆ ಅವರ ಹೆಸರಿಡಲಾಗಿದೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications