ಮುಂಬೈ : ಕನ್ನಡ ಪತ್ರಕರ್ತರ ಸಂಘದ ಸಭೆ
ಮುಂಬೈ, ಆ.13 : ಪತ್ರಕರ್ತರ ಭವನವನ್ನು ನಿರ್ಮಾಣ ಮಾಡಬೇಕು ಎಂಬ ಒಕ್ಕೊರಲ ನಿರ್ಣಯವನ್ನು ಕನ್ನಡ ಪತ್ರಕರ್ತರ ಸಂಘ ಮಹಾರಾಷ್ಟ್ರ ತೆಗೆದುಕೊಂಡಿದೆ. ಭಾನುವಾರ ನಡೆದ ಸಂಘದ ಐದನೇ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಭಾನುವಾರ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಕನ್ನಡ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸಾಮಾನ್ಯ ಸಭೆ ನಡೆಯಿತು. ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲತ್ತಾಡಿ ಮುಂದಿನ ವರ್ಷದೊಳಗೆ ಪತ್ರಕರ್ತರ ಭವನ ನಿರ್ಮಾಣವಾಗಬೇಕು ಎಂದು ನಿರ್ಣಯ ಮಂಡಿಸಿದರು.

ಪತ್ರಕರ್ತರ ಭವನ ನಿರ್ಮಾಣ ಜೊತೆ ಎಲ್ಲಾ ಪ್ರತ್ರಕರ್ತರಿಗೂ ಆರೋಗ್ಯ ವಿಮೆ ಮಾಡಿಸುವ ಉದ್ದೇಶವೂ ಇದೆ ಎಂದರು. ಸಂಘದ ಸದಸ್ಯರಿಗೆ ಅನುಕೂಲವಾಗಲು ಈ ಪ್ರಾಸ್ತಾವನೆಯನ್ನು ಸಂಘ ಶೀಘ್ರವೇ ಜಾರಿಗೊಳಿಸಬೇಕು ಎಂದು ಹೇಳಿದರು.
ಪತ್ರಕರ್ತರಿಗೆ ಜಾತಿ ಎಂಬುದಿಲ್ಲ, ಪತ್ರಿಕೋದ್ಯಮ ಎಂಬುದು ಒಂದು ಧರ್ಮ. ಸಂಘದ ಎಲ್ಲಾ ಸದಸ್ಯರು ಪ್ರತಕರ್ತ ಭವನ ನಿರ್ಮಾಣಕ್ಕಾಗಿ ಸಹಾಯ ಮಾಡಬೇಕೆಂದು ಮನವಿ ಮಾಡಿದರು. ಮುಂದಿನ ಸಾಮಾನ್ಯ ಸಭೆಯನ್ನು ಹೊಸ ಕಟ್ಟಡದಲ್ಲಿ ಮಾಡಲು ಸಂಘ ನಿರ್ಣಯ ಕೈಗೊಂಡಿತು.
ಸಂಘದ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ, ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಸಮಿತಿಯ ಎಲ್ಲಾ ಸದಸ್ಯರು ಆರೋಗ್ಯವಿಮೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪತ್ರಕರ್ತರ ಭವನ ನಿರ್ಮಾಣಕ್ಕೆ ಸದಸ್ಯರು ದೇಣಿಗೆ ನೀಡಬೇಕೆಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷರಾದ ದಯಾ ಸಾಗರ್ ಚೌಟಾ, ಜಂಟಿ ಕಾರ್ಯದರ್ಶಿ ಪ್ರೇಮನಾಥ್ ಬಿ.ಶೆಟ್ಟಿ, ಸದಸ್ಯರಾದ ಬಾಬು ಕೆ.ಬಾಲ್ ಚಂದ್, ಸವಿತಾ ಎಸ್.ಶೆಟ್ಟಿ, ಕೆ.ಎನ್.ಸುರೇಶ್, ಶ್ಯಾಂ ಎಂ ಹಂಡೆ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications