ಪಾವಗಡದ ಶಾಸಕರಿಗೆ ನಕ್ಸಲರಿಂದ ಬೆದರಿಕೆ

ಆಂಧ್ರಪ್ರದೇಶದ ಪೆನುಗೊಂಡ ಮೂಲಕ ಅಂಚೆಯಲ್ಲಿ ಬಂದ ಈ ಪತ್ರ, ಗುರುವಾರ ಶಾಸಕರ ನಿವಾಸಕ್ಕೆ ತಲುಪಿದೆ. ಪೀಪಲ್ಸ್ ವಾರ್ ಎಂಸಿಸಿ ದಳಂ ಎಂಬ ಸಂಘಟನೆಯ ಲೆಟಡ್ ಹೆಡ್ ನ ಪತ್ರದಲ್ಲಿ ರಾಮಕೃಷ್ಣ ಎಂಬುವವರ ಸಹಿ ಇದೆ.
ನೀನು ಶಾಸಕನಾಗಿದ್ದೀಯ, ನಾವು ಪೀಪಲ್ಸ್ ವಾರ್ ಗ್ರೂಪ್ ಮುಖ್ಯಸ್ಥನಾಗಿದ್ದೇನೆ. ಆ.20ರೊಳಗೆ ನಿನ್ನ ಆಸ್ತಿಯಲ್ಲಿ ಅರ್ಧದಷ್ಟನ್ನು ನಮಗೆ ನೀಡದಿದ್ದರೆ, ಕಾರು ಸ್ಫೋಟಿಸಿ ನಿನನ್ನು ಹತ್ಯೆ ಮಾಡುತ್ತೇವೆ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಶಾಸಕ ತಿಮ್ಮರಾಯಪ್ಪ ಅವರ ಆಪ್ತಸಹಾಯಕನನ್ನು ಹತ್ಯೆ ಮಾಡುವುದಾಗಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಬೆದರಿಕೆ ಪತ್ರದ ಕುರಿತು ಶಾಸಕ ತಿಮ್ಮರಾಯಪ್ಪ ಪಾವಗಡದ ಅರಸೀಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ ಆದೇಶ ನೀಡಿದ್ದಾರೆ.
ಕಿಡಿಗೇಡಿಗಳ ಕೃತ್ಯ ಶಂಕೆ : ಶಾಸಕರಿಗೆ ಬೆದರಿಕೆ ಪತ್ರ ಕಳುಹಿಸಿರುವುದು ಕಿಡಿಗೇಡಿಗಳು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಏಕೆಂದರೆ ಪಾವಗಡ ಭಾಗದಲ್ಲಿ 2000ನೇ ವರ್ಷದಿಂದ ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಿದೆ. ಹಲವು ವರ್ಷಗಳ ನಂತರ ನಕ್ಸಲರು ಇಲ್ಲಿಗೆ ಆಗಮಿಸಲು ಸಾಧ್ಯವಿಲ್ಲ ಎಂದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
ಪತ್ರವನ್ನು ತೆಲುಗು ಭಾಷೆಯಲ್ಲಿ ಬರೆಯಲಾಗಿದ್ದು ಅದರಲ್ಲಿ ಪೀಪಲ್ಸ್ ವಾರ್ ಗ್ರೂಪ್ ಎಂಬು ನಮೂದಿಸಲಾಗಿದೆ. ಆಂಧ್ರಪ್ರದೇಶದಲ್ಲಿ 15 ವರ್ಷಗಳ ಹಿಂದೆ ಪೀಪಲ್ಸ್ ವಾರ್ ಗ್ರೂಪ್ ಆರಂಭವಾಗಿತ್ತು. ಆದರೆ, 1998 ಮತ್ತು 2000ದಲ್ಲಿ ನಡೆದ ಎನ್ ಕೌಂಟರ್ ಗಳಲ್ಲಿ ಈ ಗ್ರೂಪ್ ನವರು ಮರಣ ಹೊಂದಿದ್ದಾರೆ.
ಆದ್ದರಿಂದ ಕಿಡಿಗೇಡಿಗಳು ಶಾಸಕರಿಗೆ ಹೆದರಿಸಲು ಇಂತಹ ಪತ್ರ ಕಳುಹಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications