ಉಪ ಚುನಾವಣೆ ಕಣದಲ್ಲಿ ಶೆಟ್ಟರ್ ಸಹೋದರ

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಧಾರವಾಡ ಮತ್ತು ಮೈಸೂರು ಕ್ಷೇತ್ರಗಳ ವಿಧಾನಪರಿಷತ್ ಉಪ ಚುನಾವಣೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಪ್ರದೀಪ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಾಗಿದೆ. ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಯಾರು? ಎಂಬುದು ಬಹಿರಂಗಗೊಂಡಿಲ್ಲ.
ಮೈಸೂರು ಕ್ಷೇತ್ರದಿಂದ ಯಶಸ್ವಿನಿ ಸೋಮಶೇಖರ್ ವಿಧಾನಪರಿಷತ್ ಉಪ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮೂರು ಕ್ಷೇತ್ರಗಳ ಪೈಕಿ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾರು ಎಂಬ ಬಗ್ಗೆ ಬಿಜೆಪಿ ನಾಯಕರು ಗುಟ್ಟು ಬಿಟ್ಟುಕೊಟ್ಟಿಲ್ಲ. ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯದಿನವಾಗಿದ್ದು, ಅಭ್ಯರ್ಥಿ ಯಾರು ಎಂಬುದು ಕುತೂಹಲ ಮೂಡಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಪ್ರದೀಪ್ ಶೆಟ್ಟರ್ ಸ್ಪರ್ಧಿಸಬೇಕಾಗಿತ್ತು. ಆದರೆ, ಆಗ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಸಹೋದರನಿಗೆ ಟಿಕೆಟ್ ಕೊಡಿಸಿರಲಿಲ್ಲ. ಸದ್ಯ ಉಪ ಚುನಾವಣೆ ಮೂಲಕ ಸಹೋದರನನ್ನು ವಿಧಾನಸೌಧಕ್ಕೆ ಕರೆತರುತ್ತಿದ್ದಾರೆ.
46 ವರ್ಷದ ಪ್ರದೀಪ್ ಶೆಟ್ಟರ್ ಧಾರವಾಡ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ಪ್ರದೀಪ್, ಧಾರವಾಡದಲ್ಲಿ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ.
ಯಡಿಯೂರಪ್ಪ ಕಿಡಿ : ವಿಧಾನಪರಿಷತ್ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪ್ರದೀಪ್ ಶೆಟ್ಟರ್ ಅವರನ್ನು ಕಣಕ್ಕಿಳಿಸಿರುವುದು ಮಾಜಿ ಸಿಎಂ ಮತ್ತು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡುವುದು ಬಿಟ್ಟು, ಕುಟುಂಬದವರಿಗೆ ಟಿಕೆಟ್ ನೀಡಿದ್ದಾರೆ ಎಂದು ಯಡಿಯೂರಪ್ಪ ಶೆಟ್ಟರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಧಾರವಾಡ ಕ್ಷೇತ್ರದಿಂದ ಸಿ.ಎಂ.ಉದಾಸಿ ಅಥವ ಶಿವರಾಜ್ ಸಜ್ಜನ್ ಪರಿಷತ್ ಉಪ ಚುನಾವಣೆಗೆ ಕೆಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ. ಆದರೆ, ಯಾವು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದುವು ಖಾತ್ರಿಯಾಗಿಲ್ಲ. (ಚುನಾವಣಾ ವೇಳಾಪಟ್ಟಿ)
ರಾಜ್ಯಸಭೆಗೆ ಆಯ್ಕೆ : ಒಂದು ಸ್ಥಾನದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಲೋಕಸಭೆ ಉಪ ಚುನಾವಣೆಗೆ ಆ.11ರಿಂದ ಪ್ರಚಾರ ಕಾರ್ಯ ಆರಂಭಿಸುವುದಾಗಿ ತಿಳಿಸಿದರು.












Click it and Unblock the Notifications