ಶತ್ರುವಿನ ಶತ್ರು ಮಿತ್ರನಾದರೆ ಸೈನಿಕನ ನಡೆ ಎತ್ತ?
ಚನ್ನಪಟ್ಟಣ, ಆಗಸ್ಟ್ 5: ಶತ್ರುಗಳ ಶತ್ರು ಮಿತ್ರ ಎನ್ನುವಂತೆ ಈ ಚುನಾವಣೆಯಲ್ಲಿ 'ಸೈನಿಕ ಯಾರಾದರೊಬ್ಬ ಶತ್ರುವನ್ನು ಅಪ್ಪಿಕೊಳ್ಳಬೇಕು. ಕಾರಣ ಒಂದು ಕಡೆ ವಾಲದೇ ತಟಸ್ಥಗೊಂಡರೆ ಯೋಗಿಯ ಸಾಮರ್ಥ್ಯ ಜಗಜಾಹೀರಾಗದು'.
ಈ ಮಧ್ಯೆ, 'ನನಗೆ ಡಿಕೆ ಶಿವಕುಮಾರ್ ಮತ್ತು ದೇವೇಗೌಡರ ಕುಟುಂಬ ಸಮಾನ ಶತ್ರುಗಳು ಎಂದು ಹೇಳುವ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಶಾಸಕ ಸಿಪಿ ಯೋಗೀಶ್ವರ್ ಅವರ ಚಿತ್ತ ಎತ್ತಕಡೆ? ಎನ್ನುವುದು ಕುತೂಹಲ/ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಡಿಕೆ ಸುರೇಶ್ ಗೆ ಟಿಕೆಟ್ ಖಚಿತವಾದ ನಂತರ ಡಿಕೆಶಿ-ಯೋಗಿ ರಹಸ್ಯ ಭೇಟಿ ಎಂದು ಮಾಧ್ಯಮಗಳಲ್ಲಿ ಬಂದ ಸುದ್ದಿಗೆ ಅದೆಲ್ಲ ಕಲ್ಪಿತ ಎಂದು ಚನ್ನಪಟ್ಟಣದಲ್ಲಿ ಸ್ಪಷ್ಟನೆ ನೀಡಿದ ಯೋಗೀಶ್ವರ್, ಕಾಂಗ್ರೆಸ್‌ನವರಂತೆಯೇ ಜೆಡಿಎಸ್ ನಾಯಕರೂ ಸಹ ನನ್ನನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ ಅಷ್ಟೇ ಎಂದು ನುಣುಚಿಕೊಂಡಿದ್ದರು.

'ನನಗೆ ಆರಂಭದಿಂದಲೂ ಜೆಡಿಎಸ್ ನನ್ನ ಪ್ರಬಲ ವಿರೋಧಿಯಾಗಿದ್ದರೂ, ಡಿಕೆ ಶಿವಕುಮಾರ್ ಕೊಟ್ಟ ಕಿರುಕುಳಗಳನ್ನು ನಾನು ಮರೆಯುವಂತಹದ್ದಲ್ಲ. ಅಲ್ಲದೆ, ಯಡಿಯೂರಪ್ಪನವರ ನಂತರ ಯೋಗೀಶ್ವರ್ ಮೇಲೆಯ ಅತೀ ಹೆಚ್ಚು ಕೇಸುಗಳಿವೆ ಎಂದು ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಂಡಿದ್ದು ಇದೇ ಶಿವಕುಮಾರ್ ಎಂದು ಕಾರ್ಯಕರ್ತರ ಮುಂದೆ ಯೋಗಿ ದುಃಖ ತೋಡಿಕೊಂಡಿದ್ದಾರೆ.
ಅಲ್ಲದೆ ಶಿವಕುಮಾರ್ ಅನೇಕ ಬಾರಿ ನನ್ನನ್ನು ಬಚ್ಚಾ ಎಂದು ಜರಿದಿರುವುದನ್ನು ಮತೆಯುವಂತಿಲ್ಲ ಎಂದಿದ್ದಾರೆ. ಅದ್ದರಿಂದ ನಾನು ಶಿವಕುಮಾರ್ ಬಳಿ ಈ ಚುನಾವಣೆಯ ಬಗ್ಗೆ ಮಾತನಾಡುವ ದರ್ದು ಏನೂ ಇಲ್ಲ ಎನ್ನುವ ಮಾತನಾಡಿದ್ದಾರೆ. ಮುಂದೆಯೂ ಇದು ಸಾಧ್ಯವಿಲ್ಲ ಎಂದು ಖಂಡ-ತುಂಡವಾಗಿ ಕಾರ್ಯಕರ್ತರ ಮುಂದೆ ಹೇಳಿದ್ದಾರೆ ಎಂದು ಗೊತ್ತಾಗಿದೆ.
ಹಾಗಾದರೆ, ಜೆಡಿಎಸ್ ಜತೆಗೆ ಹೇಗೆ?
ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ವಿಚಾರದಲ್ಲೂ ಸಹ ನಾನು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ದೆಹಲಿಯಲ್ಲಿ ಸೋಮವಾರ (ಆ 5ರಂದು) ಸಮಾಜವಾದಿ ಪಕ್ಷದ ಸಭೆ ಇದ್ದು, ಪಕ್ಷದ ಮುಖಂಡರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಯಾವುದಕ್ಕೂ ಕಾದುನೋಡಬೇಕಾದ ಪರಿಸ್ಥಿತಿ ಇದೆ ಎನ್ನುವ ರಾಗವನ್ನೂ ಕಾರ್ಯಕರ್ತರ ಮುಂದೆ ಹಾಡಿದ್ದಾರೆ.
ಕಾರ್ಯಕರ್ತರು ಹೇಳಿದ್ದು:
ಸಭೆಯಲ್ಲಿ ಹಾಜರಿದ್ದ ಕೆಲವು ಎಸ್ಪಿ ಮುಖಂಡರು ಮತ್ತು ಕಾರ್ಯಕರ್ತರು ಯೋಗೀಶ್ವರ್ ಅವರು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಎಸ್ಪಿಯಿಂದ ಸ್ಪರ್ಧಿಸಿದಾಗ ಕಾಂಗ್ರೆಸ್ ಯಾವುದೇ ಪೈಪೋಟಿ ನೀಡಿಲ್ಲ. ನಮಗೇ ಜೆಡಿಎಸ್ ಪ್ರಬಲ ಪೈಪೋಟಿ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಟ್ಟದಲ್ಲಿ ಮಾತನಾಡಿ ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಸೂಚಿದ್ದಾರೆ ಎನ್ನಲಾಗಿದೆ.
ಖುದ್ದು ಸೈನಿಕನದ್ದೇ ನಿರ್ಣಯಕವೇ?:
ಒಂದು ಹಂತದಲ್ಲಿ ಯೋಗೀಶ್ವರ್ ಕಾಂಗ್ರೆಸ್ ಅಥವಾ ಜೆಡಿಎಸ್ ಇವರೆಡಲ್ಲಿ ಯೋಗೀಶ್ವರ್ ಎತ್ತ ವಾಲಿದರೂ ಅದು ಮತಗಳಾಗಿ ಪರಿವರ್ತಿತವಾಗಬೇಕಿದೆ. ಮತಗಳು ತಾವು ಹೇಳಿದ ಕಡೆ ಪರಿವರ್ತನೆಯಾಗದಿದ್ದಲ್ಲಿ ಈ ಚುನಾವಣೆಯಲ್ಲಿ ನಿರ್ಣಾಯಕರಲ್ಲ ಎನ್ನುವುದು ವೇದ್ಯವಾಗುತ್ತದೆ. ಅದ್ದರಿಂದ ಯೋಗೀಶ್ವರ್ ಯಾವ ಪಕ್ಷವನ್ನು ಬೆಂಬಲಿಸುತ್ತಾರೋ ಅತ್ತ ತಮ್ಮ ಸಾಮರ್ಥ್ಯವನ್ನು ತೋರಲೇ ಬೇಕಿದೆ.
ಸಾಧ್ಯಸಾಧ್ಯತೆಗಳು?
ಯೋಗೀಶ್ವರ್ ಹೇಳುವಂತೆ ತಮ್ಮ ಪ್ರತಿ ರಾಜಕೀಯ ನಡೆಯಲ್ಲೂ ಡಿಕೆ ಶಿವಕುಮಾರ್ ತೊಡರುಗಾಲು ಹಾಕಿದ್ದಾರೆ ಎನ್ನುವುದನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪುವವರೆಗೂ ಅವರು ಸಾರಿಸಾರಿ ಹೇಳಿದ್ದಾರೆ. ಹಾಗೆ ನಮಗೆ ಕಾಂಗ್ರೆಸ್ ಟಿಕೆಟ್ ತಪ್ಪಲು ಎಚ್ಡಿ ದೇವೇಗೌಡರು ಕೂಡ ಕಾರಣ. ಅವರು ನನ್ನ ವಿರುದ್ಧ ಕಣಕ್ಕಿಳಿದಿದ್ದ ತಮ್ಮ ಸೊಸೆಯನ್ನು ಗೆಲ್ಲಿಸಿಕೊಂಡು ಪ್ರತಿಷ್ಠೆ ಮೆರೆಯಲು ಮನಮೋಹನ್ ಸಿಂಗ್ ಅವರ ಮೂಲಕ ಟಿಕೆಟ್ ತಪ್ಪಿಸಿದರೆಂದು ಸ್ವತಃ ಯೋಗೀಶ್ವರ್ ಹಲವು ಬಾರಿ ಆರೋಪಿಸಿದ್ದರು.
ಆದರೆ ಈ ಸಮಾನ ಶತ್ರುಗಳಲ್ಲಿ ಯಾರನ್ನು ಯೋಗಿ ಅಪ್ಪಿಕೊಳ್ಳುತ್ತಾರೆ ಎನ್ನುವುದು ಮಾತ್ರ ನಿಗೂಢವಾಗಿದ್ದರೂ ಹೀಗೊಂದು ಊಹೆ ಮಾಡಬಹುದು.
ಡಿಕೆ ಶಿವಕುಮಾರ್, ಪ್ರತಿ ಚುನಾವಣೆ ಸಂದರ್ಭದಲ್ಲಿ ಯೋಗೀಶ್ವರ್ ಅವರನ್ನು ಹಣಿಯಲು ತಮ್ಮ ಬೆಂಬಲಿಗರ ಮೂಲಕ ಬಹಳಷ್ಟು ಕಸರತ್ತು ನಡೆಸಿರುವವರು. ಅದರೆ, ಅದು ಫಲಪ್ರದವಾಗಲಿಲ್ಲ. ಆದ್ದರಿಂದ ಶಿವಕುಮಾರ್ ಏಷ್ಟೆ ಪ್ರಬಲವಾಗಿ ವಿರೋಧಿಸಿದರೂ ನನ್ನ ಕ್ಷೇತ್ರದಲ್ಲಿ ನನ್ನನ್ನು ಮಣಿಸುವುದು ಸುಲಭವಲ್ಲ ಎನ್ನುವುದು ಡಿಕೆಶಿಯಷ್ಟೆ ಯೋಗೀಗೂ ಕೂಡ ಮನವರಿಕೆಯಾಗಿದೆ.
ಅದ್ದರಿಂದ ಈಗಿನ ತಮ್ಮ ಪ್ರಭಲ ವಿರೋಧಿಯಾಗಿರುವ ದೇವೇಗೌಡರ ಕುಟುಂಬವನ್ನು ತಾವು ಈಗ ಬೆಂಬಲಿಸಿದರೇ ಮುಂದೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎನ್ನುವ ಜಾಣ್ಮೆಯೂ ಕೂಡ ಯೋಗೀಶ್ವರ್ ಗೆ ಇರುವುದರಿಂದ ಅವರು ತಮ್ಮ ನಡೆಯನ್ನು ಎತ್ತಕಡೆ ಇಡುತ್ತಾರೆ ಎನ್ನುವುದನ್ನು ಕಾದನೋಡಬೇಕಿದೆ. 'ಶತ್ರುಗಳ ಶತ್ರು ಮಿತ್ರ' ಎನ್ನುವಂತೆ ಈ ಚುನಾವಣೆಯಲ್ಲಿ ;ಸೈನಿಕ ಯಾರಾದರೊಬ್ಬ ಶತ್ರುವನ್ನು ಅಪ್ಪಿಕೊಳ್ಳಬೇಕು. ಕಾರಣ ಒಂದು ಕಡೆ ವಾಲದೇ ತಟಸ್ಥರಾದರೇ ಯೋಗೀಯ ಸಾಮರ್ಥ್ಯ ಜಗಜಾಹೀರಾಗದು'.












Click it and Unblock the Notifications