ನಾಗವಾರ : ಟ್ಯಾಂಕರ್ ಡಿಕ್ಕಿ ಟೆಕ್ಕಿ ಸಾವು

ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಹರೀಶ್ ಕುಮಾರ್ (33) ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಬುಧವಾರ ಇವರು ಮೃತಪಟ್ಟಿದ್ದಾರೆ ಎಂದು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.
ಬುಧವಾರ ಕೆಲಸಕ್ಕೆ ಹೊರಟಿದ್ದ ಹರೀಶ್ ಕುಮಾರ್, ಬೆಳಗ್ಗೆ 7 ಗಂಟೆ ಸುಮಾರಿಗೆ ನಾಗವಾರ ಜಂಕ್ಷನ್ ಬಳಿ ಹೋಗುತ್ತಿದ್ದಾಗ, ಅವರ ಮೊಬೈಗೆ ಕರೆ ಬಂದಿದೆ. ಬೈಕ್ ಅನ್ನು ರಸ್ತೆ ಬದಿ ನಿಲ್ಲಿಸಿ, ಹರೀಶ್ ಮಾತನಾಡುತ್ತಿದ್ದರು. ಆಗ ಹಿಂಬದಿಯಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಹರೀಶ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಟ್ಯಾಂಕರ್ ಚಾಲಕ ಅಪಘಾತ ನಡೆದ ಸ್ಥಳದಲ್ಲಿ, ಲಾರಿ ಬಿಟ್ಟು ಪರಾರಿಯಾಗಿದ್ದ. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ಯಾಂಕರ್ ವಶಪಡಿಸಿಕೊಂಡಿದ್ದರು.
ಚಾಲಕ ಸರೆ : ಟ್ಯಾಂಕರ್ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಟ್ಯಾಂಕರ್ ಚಾಲಕ ಆನಂದರ್ ಎಂಬುವವರನ್ನು ಬುಧವಾರ ಸಂಜೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಅಪಘಾತ ಮಾಡಿರುವುದಾಗಿ ಚಾಲಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಶಿವಮೊಗ್ಗ ಮೂಲದವರು : ಹರೀಶ್ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications