ಅನ್ನಭಾಗ್ಯಯೋಜನೆಗೆ ಗೋಧಿ, ಜೋಳ ಸೇರ್ಪಡೆ

ಸೆಪ್ಟೆಂಬರ್ ನಿಂದ ಈ ಅವಕಾಶ ಲಭ್ಯವಿದ್ದು, ಇದಕ್ಕೆ ಅಗತ್ಯವಿರುವ ಗೋಧಿ ಮತ್ತು ಜೋಳವನ್ನು ಸಂಗ್ರಹಿಸುವ ಕಾರ್ಯವನ್ನು ಸರ್ಕಾರ ಪ್ರಾರಂಭಿಸಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಇನ್ನು ಮುಂದೆ ಅಕ್ಕಿ ಬೇಡದಿದ್ದರೆ, ಗೋಧಿ ಅಥವ ಜೋಳ ಖರೀದಿಸಬಹುದಾಗಿದೆ.
ಉತ್ತರ ಕರ್ನಾಟಕ ಭಾಗದ ಜನರು ಅಕ್ಕಿ ಬದಲು ಗೋಧಿ, ಜೋಳ ನೀಡಿ ಎಂಬ ಬೇಡಿಕೆ ಇಟ್ಟಿರುವುದರಿಂದ ಸರ್ಕಾರ ಯೋಜನೆಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಅಗತ್ಯವಿರುವ ಜೋಳವನ್ನು, ರಾಜ್ಯದ ರೈತರಿಂದಲೇ ಖರೀದಿಸಲು ಸರ್ಕಾರ ನಿರ್ಧರಿಸಿದೆ.
ಅಂತ್ಯೋದಯ ಯೋಜನೆಯಡಿ ಸರ್ಕಾರ ಈಗಾಗಲೇ 6 ಕೆ.ಜಿ.ಗೋಧಿಯನ್ನು 3 ರೂ.ದರದಲ್ಲಿ ನೀಡುತ್ತಿದೆ. ಇದರ ಬೆಲೆಯನ್ನು 1 ರೂ.ಗಳಿಗೆ ಇಳಿಸಿ ಅನ್ನ ಭಾಗ್ಯ ಯೋಜನೆಯಡಿ ವಿತರಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ಈಗಾಗಲೇ 27 ಮೆಟ್ರಿಕ್ ಟನ್ ಗೋಧಿಯನ್ನು ದಾಸ್ತಾನು ಮಾಡಿದೆ.
ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲು ಉದ್ದೇಶಿಸಿರುವ ಜೋಳವನ್ನು ಉತ್ತರ ಕರ್ನಾಟಕ ಭಾಗದ ರೈತರಿಂದ ಖರೀದಿ ಮಾಡಲು ನಿರ್ಧರಿಸಲಾಗಿದೆ. ರೈತರು ಸಹ ಜೋಳವನ್ನು ಸರ್ಕಾರಕ್ಕೆ ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಛತ್ತೀಸ್ ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಅಕ್ಕಿಯನ್ನು ಖರೀದಿಸುವುದಕ್ಕಿಂತ, ನಮ್ಮ ರಾಜ್ಯದ ರೈತರು ಬೆಳೆದ ಜೋಳ ಮತ್ತು ಗೋಧಿಯನ್ನು ಖರೀದಿಸಿ ಜನರಿಗೆ ವಿತರಿಸುವುದು ಸರ್ಕಾರದ ಆಲೋಚನೆ. (ಪೊಲೀಸರಿಗಿಲ್ಲ ಅನ್ನಭಾಗ್ಯ)
ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಏರಿದ ತಕ್ಷಣ ಘೋಷಿಸಿದ ಅನ್ನಭಾಗ್ಯ ಯೋಜನೆ ಜಾರಿಗೊಂಡಿದೆ. ಯೋಜನೆಯಡಿ ಗೋಧಿ ಮತ್ತು ಜೋಳ ನೀಡುವ ಯೋಜನೆ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ.












Click it and Unblock the Notifications