ಕಟ್ಟಡದಿಂದ ಬಿದ್ದು ಡಿವಿಎಸ್ ಭದ್ರತಾ ಸಿಬ್ಬಂದಿ ಸಾವು

ಮೃತರನ್ನು ಎಂ.ನಾಗರಾಜು (51) ಎಂದು ಗುರುತಿಸಲಾಗಿದೆ. ನಾಗರಾಜು ಚಂದ್ರಾ ಲೇಔಟ್ ಕಲ್ಯಾಣ ನಗರದಲ್ಲಿ, ಹೊಸದಾಗಿ ಮನೆ ಕಟ್ಟಿಸುತ್ತಿದ್ದರು. 2ನೇ ಮಹಡಿಯ ಮೇಲೆ ನೀರಿನ ಟ್ಯಾಂಕ್ ಇಡುವ ಜಾಗ ಪರಿಶೀಲಿಸಲು ಹೋದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು, ಸಾವನ್ನಪ್ಪಿದ್ದಾರೆ
ಮೈಸೂರು ರಸ್ತೆಯ ಸಿರ್ಸಿ ವೃತ್ತದ ಬಳಿಯ ಪೊಲೀಸ್ ವಸತಿ ಗೃಹದಲ್ಲಿ ನಾಗರಾಜು ವಾಸಿಸುತ್ತಿದ್ದರು. ಭಾನುವಾರ ರಜೆ ಇದ್ದ ಕಾರಣ ತಮ್ಮ ಮನೆ ನಿರ್ಮಾಣದ ಕಾಮಗಾರಿ ನೋಡಲು ತೆರಳಿದ್ದರು, ಮನೆಯ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ಕೆಲಸಗಳು ಮಾತ್ರ ಬಾಕಿ ಇತ್ತು, ನೀರಿನ ಟ್ಯಾಂಕ್ ಇಡುವ ಜಾಗ ನೋಡಲು ಹೋದಾಗ ದುರ್ಘಟನೆ ನಡೆದಿದೆ.
ನಾಗರಾಜು ಅವರು ಕೆಳಗೆ ಬಿದ್ದ ತಕ್ಷಣ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ವೈದ್ಯರು ನಾಗರಾಜು ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಎಸ್ಕಾರ್ಟ್ ಸಿಬ್ಬಂದಿ : ಸಿಆರ್ ಎ ಮುಖ್ಯ ಪೇದೆಯಾಗಿದ್ದ ನಾಗರಾಜು ಅವರನ್ನು ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾದ ನಂತರ ಅವರ ಭದ್ರತೆ ನೋಡಿಕೊಳ್ಳುವ ಎಸ್ಕಾರ್ಟ್ ಸಿಬ್ಬಂದಿಯಾಗಿ ನೇಮಿಸಲಾಗಿತ್ತು.
ಸದಾನಂದಗೌಡರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ನಾಗರಾಜು ಅವರು, ಎಸ್ಕಾರ್ಟ್ ಸಿಬ್ಬಂದಿಯಾಗಿ ಸೇವೆ ಮುಂದುವರೆಸಿದ್ದರು. ನಾಗರಾಜು, ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿ ಗಂಗಲಕ್ಷ್ಮಮ್ಮ ಅವರನ್ನು ಅಗಲಿದ್ದಾರೆ. ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications