ಬೆಂಗಳೂರು : ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಪುಟ್ಟಸ್ವಾಮಿ ಲೇಔಟ್ ನಿವಾಸಿಯಾದ ರೇಣುಕಾ(28), ಮಕ್ಕಳಾದ ನಿವೇದಿತಾ(7) ಮತ್ತು ಕಾರ್ತಿಕ್ (9) ಮೃತ ದುರ್ದೈವಿಗಳು. ಮನೆಯಲ್ಲಿ ಪತಿ ಇಲ್ಲದ ಸಂದರ್ಭದಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದು ರೇಣುಕಾ ನೇಣಿಗೆ ಶರಣಾಗಿದ್ದಾರೆ.
ರೇಣುಕಾ ಪತಿ ಉಮೇಶ್ ಕೋಳಿ ಫಾರಂ ನಡೆಸುತ್ತಿದ್ದು, ಮಂಗಳವಾರ ತಡರಾತ್ರಿ ಅವರು ಮನೆಗೆ ಆಗಮಿಸಿದಾಗ, ಹೆಂಡತಿ ಮಕ್ಕಳು ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ.
ಮಗನನ್ನೆ ಕೊಂದಳು : ಮೊದಲು ಮಗ ಕಾರ್ತಿಕ್ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿರುವ ರೇಣುಕಾ, ನಂತರ ಮಗಳು ನಿವೇದಿತಾಗೆ ನೇಣು ಹಾಕಿದ್ದಾರೆ. ಕೊನೆಗೆ ತಾವು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ರೇಣುಕಾ ಹಾಗೂ ರೈತ ಉಮೇಶ್ ವಿವಾಹವಾಗಿದ್ದರು. ಆದರೆ, ಮದುವೆ ಬಳಿಕ ಸಾಂಸಾರಿಕ ವಿಚಾರಗಳಿಗೆ ಉಮೇಶ್ ಪೋಷಕರು ಮತ್ತು ರೇಣುಕಾ ಮಧ್ಯೆ ಮನಸ್ತಾಪ ಮೂಡಿತ್ತು. ಈ ಬೆಳವಣಿಗೆ ಬಳಿಕ ಪತ್ನಿ ಹಾಗೂ ಮಕ್ಕಳೊಂದಿಗೆ ಉಮೇಶ್ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಆಗಾಗ್ಗೆ ಗಲಾಟೆ: ತನ್ನ ವರ್ತನೆಯನ್ನು ಸುಧಾರಿಸಿಕೊಳ್ಳದ ರೇಣುಕಾ, ಕ್ಷುಲ್ಲಕ ವಿಚಾರಗಳಿಗೂ ನೆರೆಹೊರೆಯವರೊಂದಿಗೆ ಗದ್ದಲ ಮಾಡಿಕೊಳ್ಳುತ್ತಿದ್ದರು. ಇತ್ತ ಮನೆಯಲ್ಲಿ ಕೌಟುಂಬಿಕ ವಿಷಯಗಳಿಗೆ ಪದೇ ಪದೇ ಉಮೇಶ ದಂಪತಿ ಮಧ್ಯೆ ಜಗಳವಾಗುತ್ತಿತ್ತು.
ಭಾನುವಾರ ಮತ್ತು ಸೋಮವಾರ ಪತಿಯೊಂದಿಗೆ ರೇಣುಕಾ ಕೋಳಿ ಫಾರಂ ಬಳಿ ಇರುವ ತೋಟದ ಮನೆಯಲ್ಲಿ ಇದ್ದರು. ಈ ಸಂದರ್ಭದಲ್ಲಿ ಇವರ ನಡುವೆ ಜಗಳ ನಡೆದಿದ್ದು, ಮಂಗಳವಾರ ಮನೆಗೆ ಬಂದ ರೇಣುಕಾ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ರೇಣುಕಾ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ. ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications