ಪಿಎಂ : ಮೋದಿ ಹೆಸರು ಅಡ್ವಾಣಿಯಿಂದಲೇ ಘೋಷಣೆ?
ನವದೆಹಲಿ, ಜು. 9 : ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನಡುವಿನ ಹಣಾಹಣಿಯಲ್ಲಿ ಅಂತಿಮವಾಗಿ ಮೋದಿ ಅವರಿಗೆ ಜಯ ಸಿಗುವ ಎಲ್ಲ ಲಕ್ಷಣಗಳು ಗೋಚರಿಸಿವೆ. ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೆಂದು ಅಡ್ವಾಣಿ ಅವರು ಒಪ್ಪುವುದು ಹೆಚ್ಚೂಕಡಿಮೆ ಖಚಿತವಾಗಿದೆ.
ಇದೇ ತಿಂಗಳು ಭಾರತೀಯ ಜನತಾ ಪಕ್ಷ ಆಯೋಜಿಸಲಿರುವ ಪತ್ರಕಾಗೋಷ್ಠಿಯಲ್ಲಿ ಸ್ವತಃ ಲಾಲ್ ಕೃಷ್ಣ ಅಡ್ವಾಣಿ ಅವರು ನರೇಂದ್ರ ಮೋದಿ ಅವರ ಹೆಸರನ್ನು ಅಧಿಕೃತ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಿದ್ದಾರೆ ಎಂದು ಬಲ್ಲ ಮೂಲಗಳು ಒನ್ಇಂಡಿಯಾಗೆ ತಿಳಿಸಿವೆ. ಈ ಮೂಲಕ, ಅಡ್ವಾಣಿ ಅವರ ಆಶೀರ್ವಾದ ಪಡೆದುಕೊಂಡೇ ಮೋದಿ ಅವರು ಲೋಕಸಭೆ ಚುನಾವಣೆ ಅಭಿಯಾನ ಆರಂಭಿಸಲಿದ್ದಾರೆ.

ಅಡ್ವಾಣಿ ಮತ್ತು ಮೋದಿ ಅವರ ನಡುವಿನ ವೈಮನಸ್ಯಕ್ಕೆ ಮುಲಾಮು ಹಚ್ಚಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷ ಮೋಹನ್ ಭಾಗವತ್. ಕೆಲ ದಿನಗಳ ಹಿಂದೆ ಅಡ್ವಾಣಿ ಅವರು ಬಿಜೆಪಿಯ ಎಲ್ಲ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಮಾತುಕತೆ ಮೂಲಕ ರಾಜೀನಾಮೆ ವಾಪಸ್ ಪಡೆಯುವಲ್ಲಿ ಭಾಗವತ್ ಪ್ರಮುಖ ಪಾತ್ರ ವಹಿಸಿದ್ದರು. ಈಗ ಇಬ್ಬರೂ ದಿಗ್ಗಜರನ್ನು ಒಂದು ಮಾಡಿದವರೂ ಭಾಗವತ್ ಅವರೇ.
ನರೇಂದ್ರ ಮೋದಿ ಅವರ ಕುರಿತು ತಳೆದಿದ್ದ ಎಲ್ಲ ಭಿನ್ನಾಭಿಪ್ರಾಯ, ಅಪನಂಬಿಕೆಗಳನ್ನು ತ್ಯಜಿಸುವಂತೆ ಮೋಹನ್ ಭಾಗವತ್ ಅವರು ಅಡ್ವಾಣಿ ಅವರನ್ನು ಮನವೊಲಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ. ಈ ನಡೆ ವಿರೋಧ ಪಕ್ಷಗಳಲ್ಲಿ ಅಚ್ಚರಿ ಮೂಡಿಸುವುದು ಮಾತ್ರವಲ್ಲ ಕೆಲ ಪಕ್ಷಗಳಿಗೆ ನಡುಕ ಹುಟ್ಟಿಸಲಿದೆ ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಬಲವಾಗಿ ಕೇಳಿಬರುತ್ತಿವೆ.
ಒಂದು ಮೂಲದ ಪ್ರಕಾರ, ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ಅಡ್ವಾಣಿ ಅವರಿಗೆ ಮುಕ್ತಹಸ್ತ ನೀಡಲಾಗಿದೆ. ಇದೇ ಅವರು ತಮ್ಮ ನಿರ್ಧಾರ ಬದಲಿಸಲು ಕಾರಣವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರೊಡನೆ ನರೇಂದ್ರ ಮೋದಿ ಕೂಡ ಪ್ರಮುಖ ನಿರ್ಣಯ ತೆಗೆದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಜೊತೆಗೆ, ಸುಷ್ಮಾ ಸ್ವರಾಜ್ ಅವರಿಗೂ ಪ್ರಮುಖ ಜವಾಬ್ದಾರಿ ದೊರೆಯಲಿದೆ.
ಅಡ್ವಾಣಿ ಮತ್ತು ಮೋದಿ ನಡುವಿನ ಕಲಹದ ಬಗ್ಗೆ ಇರುವ ಎಲ್ಲ ಅಭಿಪ್ರಾಯ, ವಿವಾದ, ತಪ್ಪು ಕಲ್ಪನೆಗಳನ್ನು ದೂರ ಮಾಡುವ ಉದ್ದೇಶದಿಂದ, ಮೋದಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸುವ ಜವಾಬ್ದಾರಿಯನ್ನು ಬಿಜೆಪಿಯ ಹಿರಿಯ ನಾಯಕರು ಅಡ್ವಾಣಿ ಅವರಿಗೇ ವಹಿಸಿಕೊಟ್ಟಿದ್ದಾರೆ. ಈ ಜವಾಬ್ದಾರಿಯನ್ನು ಹೊರಲು ಅಡ್ವಾಣಿ ಕೂಡ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಕಹಳೆ ಊದುವುದು ಮಾತ್ರ ಬಾಕಿಯಿದೆ. [ಯಡಿಯೂರಪ್ಪಗೆ ಜೈ ಅನ್ನಲಿದ್ದಾರೆ ಅನಂತ್]












Click it and Unblock the Notifications