ಕನ್ನಡೇತರರ ಕನ್ನಡ ಶಾಲೆಗೆ ಒಂದು ವರ್ಷದ ಹರ್ಷ!
ಬೆಂಗಳೂರು, ಜು.6 : ಕರ್ನಾಟಕದ ರಾಜಧಾನಿ ಐಟಿ ಸಿಟಿಯಾಗಿ ಪರಿವರ್ತನೆಗೊಂಡು ವರುಷಗಳು ಉರುಳಿವೆ. ದೇಶ-ವಿದೇಶಗಳ ಐಟಿ ಕಂಪನಿಗಳಿಂದಾಗಿ ಸಾವಿರಾರು ಸಾಫ್ಟವೇರ್ ಇಂಜಿನಿಯರ್ ಗಳು ಕನ್ನಡನಾಡಿನ ರಾಜಧಾನಿಯಲ್ಲಿ ನೆಲೆಸಿದ್ದಾರೆ. ಇವರು ಕನ್ನಡ ಕಲಿಯುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಸಾಫ್ಟವೇರ್ ಕಾಂತ್ರಿಯ ಫಲವಾಗಿ ಬೆಂಗಳೂರು ವಿವಿಧ ಭಾಷಿಕರ ತವರೂರಾಗಿದೆ. ತಮಿಳು, ತೆಲಗು, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಹೀಗೆ ವಿವಿಧ ಭಾಷೆಗಳನ್ನು ಆಡುವ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ವಿವಿಧ ಭಾಷೆಗಳ ಸಂಗಮದ ನಡುವೆ ಕನ್ನಡ ಭಾಷೆ ಸಿಲುಕಿದೆ. ಸಾಫ್ಟವೇರ್ ಪ್ರಪಂಚದವರು ಕನ್ನಡ ಭಾಷೆಗೆ ಆದ್ಯತೆ ಕೊಡುವುದಿಲ್ಲ. ಕರ್ನಾಟದ ಟೆಕ್ಕಿಗಳು ಕನ್ನಡ ಮಾತನಾಡುವುದಿಲ್ಲ ಎಂಬ ಅಪವಾದಗಳು ಸದಾ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಆದರೆ, ಈ ಆರೋಪಗಳನ್ನು ಸುಳ್ಳು ಮಾಡಿದ್ದಾರೆ ನಾಲ್ವರು ಟೆಕ್ಕಿಗಳು.
ಕನ್ನಡ ನಾಡಿನ ಸಾಫ್ಟವೇರ್ ಕಂಪನಿಗಳ ನಾಲ್ವರು ಉದ್ಯೋಗಿಗಳು ಕನ್ನಡ ಭಾಷೆಯ ಮೇಲೆ ಅಪರಿಮಿತವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ತಾವೇ ಕನ್ನಡ ಕಲಿಕಾ ಶಾಲೆ ಪ್ರಾರಂಭಿಸಿ, ಬೇರೆ ಭಾಷೆಯ ಜನರಿಗೆ ಸಂವಹನ ನಡೆಸಲು ಸಾಧ್ಯವಾದಷ್ಟು ಕನ್ನಡ ಪಾಠ ಮಾಡುತ್ತಾರೆ. ಏನಿದು ಕನ್ನಡ ಶಾಲೆ ನೋಡೋಣ ಬನ್ನಿ.

ಏನಿದು ಕನ್ನಡ ಕಲಿಕಾ ಶಾಲೆ
ಬೆಂಗಳೂರಿಗೆ ಬರುವ ಅನ್ಯ ಭಾಷಿಕರಿಗೆ ಕನ್ನಡಿಗರ ಜೊತೆ ಸಂವಹನ ನಡೆಸಲು ಸಾಧ್ಯವಾಗುವಷ್ಟು ಕನ್ನಡ ಕಲಿಸುವುದೇ ಕನ್ನಡ ಕಲಿಕಾ ಶಾಲೆಯ ಉದ್ದೇಶ. ನಗರದ ಕೋರಮಂಗಲದ ಸೇವಾಸದನಸಲ್ಲಿ ಇವರ ಕನ್ನಡ ಶಾಲೆ ಇದೆ.

ಯಾವಾಗ ಪಾಠ ಮಾಡುತ್ತಾರೆ
ವಾರದ ಕೊನೆಗೆ ಟೆಕ್ಕಿಗಳು ಟ್ರಿಪ್ ಹೊರಟರೆ ಇವರು ಕನ್ನಡ ಶಾಲೆಯಲ್ಲಿ ಪಾಠ ಮಾಡುತ್ತಾ, ಅನ್ಯ ಭಾಷಿಕರಿಗೆ ಪಾಠ ಮಾಡುತ್ತಾರೆ. ಶನಿವಾರ ಮತ್ತು ಭಾನುವಾರ ಇವರ ಕನ್ನಡ ಕಲಿಕಾ ಶಾಲೆ ಕಾರ್ಯ ನಿರ್ವಹಿಸುತ್ತದೆ. ಒಂದು ಬ್ಯಾಚ್ ನಲ್ಲಿ 15ರಿಂದ 20 ವಿದ್ಯಾರ್ಥಿಗಳು ಇರುತ್ತಾರೆ.

ಶಾಲೆ ಪ್ರಾರಂಭವಾಗಿದ್ದು ಹೇಗೆ?
ಕನ್ನಡ ಭಾಷೆಗೆ ಕೈಲಾದಷ್ಟು ಸೇವೆ ಮಾಡಬೇಕು ಎಂದು ಅಂದು ಕೊಂಡ ನಾಲ್ವರು ಕಚೇರಿಯಲ್ಲಿ ಇಷ್ಟವಿರುವ ಸಹೋದ್ಯೋಗಿಗಳಿಗೆ ಸಂವಹನ ನಡೆಸುವ ಕನ್ನಡ ಹೇಳಿಕೊಡಲು ಪ್ರಾರಂಭಿಸಿದರು. ಇದು ನಂತರ ವಿಸ್ತರಣೆಯಾಗಿ, ಕನ್ನಡ ಕಲಿಕಾ ಶಾಲೆಯಾಗಿ ಬದಲಾಗಿದೆ.

ಏನು ಹೇಳಿಕೊಡುತ್ತಾರೆ
ಕನ್ನಡ ಕಲಿಕಾ ಶಾಲೆಯ ಪ್ರತಿ ಬ್ಯಾಚಿನ ಅವಧಿ ಒಂದು ತಿಂಗಳು. ಈ ಅವಧಿಯಲ್ಲಿ ಸಂವಹನ ನಡೆಸುವಷ್ಟು ಕನ್ನಡವನ್ನು ಹೇಳಿಕೊಡಲಾಗುತ್ತದೆ. ಓದು, ಬರವಣಿಗೆ, ಮಾತುಕತೆ ಮುಂತಾದವುಗಲೇ ಪಾಠ ಮಾಡುವ ವಿಧಾನವಾಗಿದೆ.

ಶಾಲೆಗೆ ಸೇರುವುದು ಹೇಗೆ?
ಟೆಕ್ಕಿಗಳು ಮೊದಲು ತಮ್ಮ ಕಚೇರಿಯ ಸಹೋದ್ಯೋಗಿಗಳಿಗೆ ಕನ್ನಡ ಕಲಿಸಲು ಪ್ರಾರಂಭಿಸಿದರು. ಇದನ್ನು ತಿಳಿದ ಬೇರೆ-ಬೇರೆ ಸಾಫ್ಟವೇರ್ ಕಂಪನಿಗಳ ಉದ್ಯೋಗಿಗಳು ಇವರ ಕನ್ನಡ ಶಾಲೆಗೆ ಸೇರಿದ್ದಾರೆ. ಕನ್ನಡ ಶಾಲೆಗೆ ಸೇರ್ಪೆಡಗೊಳ್ಳುವವರು, ಕನ್ನಡ ಶಾಲೆಯ ಫೇಸ್ ಬುಕ್ ಅಕೌಂಟ್ www.facebook.com/KannadaLearningSchool ಮೂಲಕ ಸಂಪರ್ಕಿಸಬಹುದು.

ಕನ್ನಡ ಶಾಲೆ ಉಚಿತವಲ್ಲ
ಕನ್ನಡ ಕಲಿಕಾ ಶಾಲೆಯ ಒಂದು ತಿಂಗಳ ಅಭ್ಯಾಸಕ್ಕೆ ನೀವು 1000 ರೂ. ಕೊಡಬೇಕು. ಕಾಲೇಜಿನ ಕೊಠಡಿ ಬಾಡಿಗೆ ಪಡೆದು ತರಗತಿ ನಡೆಸಲಾಗುತ್ತದೆ. ಪಠ್ಯದ ಪುಸ್ತಕ, ಪೆನ್ನು ಮುಂತಾದವುಗಳಿಗೆ ನೀವು ಕೊಟ್ಟ ಹಣ ಉಪಯೋಗವಾಗುತ್ತದೆ. ನಿಮಗೆ ಕನ್ನಡ ಕಲಿಯಲು ಸಾಧ್ಯವಾಗುತ್ತದೆ.

ಒಂದು ವರ್ಷ ಪೂರೈಸಿತು ಶಾಲೆ
ಕನ್ನಡ ಕಲಿಕಾ ಶಾಲೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಒಂದು ವರ್ಷದ ಅವಧಿಯಲ್ಲಿ ನೂರಾರು ವಿದ್ಯಾರ್ಥಿಗಳು ವಯಸ್ಸಿನ ಮಿತಿ ಇಲ್ಲದೆ, ಶಾಲೆಯಿಂದ ಕನ್ನಡ ಕಲಿತಿದ್ದಾರೆ. ಟೆಕ್ಕಿಗಳ ಪ್ರಾಯೋಗಿಕವಾಗಿ ಪ್ರಾರಂಭಿಸಿದ ಯೋಜನೆ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ.

ವಿಶೇಷ ಕಾರ್ಯಕ್ರಮ
ಕನ್ನಡ ಕಲಿಕಾ ಶಾಲೆ ಒಂದು ಪೂರೈಸಿದ ಸಂರ್ಭದಲ್ಲಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಜುಲೈ 13ರ ಶನಿವಾರ ನಡೆಯಲಿದೆ. ಕನ್ನಡ ಭವನದ ನಯನ ಸಭಾಂಗಣದಲ್ಲಿ ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲೆಯ ಪುಸ್ತಕ ಬಿಡುಗಡೆ ಆಗಲಿದೆ. ನಿಮಗೆ ಸಮಯವಿದ್ದರೆ, ಹೋಗಿ ಕನ್ನಡದ ಕಲಿಗಳಿಗೆ ಅಭಿನಂದನೆ ಸಲ್ಲಿಸಿ ಬನ್ನಿ.












Click it and Unblock the Notifications