ಮಾನಸ ಗಂಗೋತ್ರಿಯಲ್ಲಿ ಶುಕ್ರವಾರದ ಸಂಭ್ರಮ

ಎಸ್ಸೆಸ್ಸೆಲ್ಸಿ ಮತ್ತು ಪಿಯೂಸಿ ಪರೀಕ್ಷೆ ಫಲಿತಾಂಶಗಳಂತೆಯೇ ಪ್ರತಿಶತ ಫಲಿತಾಂಶ ಗಳಿಕೆಯಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ ಪಿಎಚ್ ಡಿ ಪದವಿ ಗಳಿಸುವಲ್ಲಿ ಹುಡುಗರು ಮುಂದಿದ್ದಾರೆ. ಇದಕ್ಕೆ ಕಾರಣ ಏನಿರಬಹುದು?
ಒಟ್ಟು 363 ವಿದ್ಯಾರ್ಥಿಗಳು 50 ವಿವಿಧ ವಿಷಯಗಳಲ್ಲಿ ಪಿಎಚ್ಡಿ ಪರೀಕ್ಷೆ ಬರೆದಿದ್ದರು. 231 ಪದವಿಗಳನ್ನು ಹುಡುಗರು ಗಳಿಸಿದರೆ 132 ಪದವಿಗಳು ಹುಡುಗಿಯರ ಪಾಲಾದವು. ಇನ್ನು ಸ್ನಾತಕೋತ್ತರ ವಿಭಾಗದಲ್ಲಿ 3,278 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ 296 ಪದಕಗಳನ್ನು ಹಾಗೂ 159 ಬಹುಮಾನಗಳನ್ನು ವಿದ್ಯಾರ್ಥಿ ಸಮುದಾಯ ಹಂಚಿಕೊಳ್ಳಲಿದೆ ಎಂದು ಉಪ ಕುಲಪತಿ ಕೆ. .ಎಸ್ ರಂಗಪ್ಪ ತಿಳಿಸಿದರು.
ಹಾಗೇನೇ, ವಿಜ್ಞಾನಿ ರೊದ್ದಂ ನರಸಿಂಹ, ಕ್ರಿಕೆಟಿಗ ಅನಿಲ್ ಕುಂಬ್ಳೆ, ಸ್ವಾತಂತ್ರ್ಯ ಹೋರಾಟಗಾರ ಡಾ. ಶ್ರೀನಿವಾಸಯ್ಯ ಹಾಗೂ ಕಾನೂನು ತಜ್ಞ ಟಿ.ಕೆ ವಿಶ್ವನಾಥ್ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ. ಗೌರವಕ್ಕೆ ಪಾತ್ರರಾಗಿರುವ ಸಾಧಕರಿಗೆ ಒನ್ ಇಂಡಿಯ ಕನ್ನಡ ಜಾಲತಾಣದ ಅಭಿನಂದನೆಗಳು.
ಘಟಿಕೋತ್ಸವವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಡಾ. ಎಂ.ಎಂ ಪಲ್ಲಂರಾಜು ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಮೈಸೂರು ವಿವಿ [ http://www.uni-mysore.ac.in/ ] ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ವರ್ಷಪೂರ್ತಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ಮಾಡಿದ ಮಾನಸ ಗಂಗೋತ್ರಿಗೆ ನಾಳೆಯ ಶುಕ್ರವಾರ ವಿಶೇಷವಾದದ್ದು. ಭೋದಕ ವರ್ಗ, ಆಡಳಿತ ವರ್ಗ ಹಾಗೂ ವಿದ್ಯಾರ್ಥಿ ವೃಂದಕ್ಕೆ ಸಂಭ್ರಮದ ದಿನ. ಇದೇ ವೇಳೆ, ಪದವಿಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ಡ್ರೆಸ್ ಕೋಡ್ ಇರುವುದಿಲ್ಲ ಎಂದು ಉಪಕುಲಪತಿಗಳು ಸ್ಪಷ್ಟಪಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ 1916 ನೆ ಇಸವಿ ಜುಲೈ 27 ರಂದು ಆರಂಭವಾಯಿತು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ (1884-1940) ಆಳ್ವಿಕೆಯಲ್ಲಿ, ಅಂದಿನ ಮೈಸೂರು ಸಂಸ್ಥಾನದಲ್ಲಿ ಆದ ಒಳ್ಳೆಯ ಕೆಲಸಗಳಲ್ಲಿ ಇದೂ ಒಂದು.












Click it and Unblock the Notifications