ಮೋದಿ-ಯಡಿಯೂರಪ್ಪ ಮಿಲನಕ್ಕೆ ಅಡ್ವಾಣಿ ಅಡ್ಡಿ
ಬೆಂಗಳೂರು, ಜು.4: 'ಮೋದಿ-ಯಡಿಯೂರಪ್ಪ ಮಿಲನಕ್ಕೆ ಅಡ್ವಾಣಿ ಅಡ್ಡಿ'- ಇದು ನಿರೀಕ್ಷಿತ ಹಾಗೂ ಸಹಜ ಪ್ರತಿಕ್ರಿಯೆ ಎನ್ನಬಹುದು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾದ ದಿನದಿಂದಲೂ ಅಡ್ವಾಣಿ ಹಾಗೂ ಮೋದಿ ಪರ ತಂಡಗಳು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದೇ ನಿತ್ಯ ಕಾಯಕವಾಗಿದೆ. ಈ ನಡುವೆ ಯಡಿಯೂರಪ್ಪ ಪಕ್ಷಕ್ಕೆ ಹಿಂತಿರುಗುವ ವಿಷಯ ಉಭಯ ತಂಡಕ್ಕೂ ಪ್ರತಿಷ್ಠೆಯಾಗಿದೆ.
ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಭ್ರಷ್ಟಾಚಾರ ಆರೋಪ ಹೊತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪುನಃ ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಸುತರಾಂ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರಂತೆ.
ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಸ್ಥಾಪಿತ ಕರ್ನಾಟಕ ಜನತಾ ಪಕ್ಷದ ಸಾಧನೆಯನ್ನು ಮೋದಿ ಅಳೆದು ತೂಗಿ ಯಡಿಯೂರಪ್ಪ ಅವರ ವಾಪಸ್ಸಾತಿಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಕೆಜೆಪಿ ಶೇ 10 ರಷ್ಟು ಮತ ಸೆಳೆದಿದ್ದು ಮೋದಿ ಗಮನ ಸೆಳೆದಿತ್ತು. ಇದೇ ಸಾಧನೆ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ತೋರಿಸಿದರೆ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂಬುದು ಮೋದಿ ಲೆಕ್ಕಾಚಾರ.
ಅಡ್ವಾಣಿ ಈ ವಾದವನ್ನು ಬದಿಗೊತ್ತಿ, ವಿಧಾನಸಭೆ ಚುನಾವಣೆಯೇ ಬೇರೆ ಲೋಕಸಭೆ ಕಾದಾಟದ ಲೆಕ್ಕಾಚಾರವೇ ಬೇರೆ ಇದು ಮೋದಿಗೆ ಇನ್ನೂ ಅರಿವಾಗಬೇಕಿದೆ. ಅಷ್ಟಕ್ಕೂ ಭ್ರಷ್ಟಾಚಾರಿಗಳನ್ನು ದೂರವಿಡಲು ಬಿಜೆಪಿ ಪಣತೊಟ್ಟಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. 'ಯಡಿಯೂರಪ್ಪ ಬಿಜೆಪಿಗೆ ವಾಪಸ್' ಕುರಿತ ಸದ್ಯದ ಬೆಳವಣಿಗೆಗಳ ಸಂಗ್ರಹ ಇಲ್ಲಿದೆ ನೋಡಿ...

ಮೋದಿ ಕೈಲಿ ಎಲ್ಲಾ ಇದೆ
ಯಡಿಯೂರಪ್ಪ ಅವರು ಆರೋಪ ರಹಿತರಾದ ಮೇಲೆ ಮಾತ್ರ ಬಿಜೆಪಿಗೆ ಮರಳಲಿ ಎಂದು ಅಡ್ವಾಣಿ ಹೇಳಿದ್ದಾರೆ. ಅದರೆ, ಅಡ್ವಾಣಿ ವಿರೋಧದ ನಡುವೆಯೂ ಮೋದಿ ಅವರು ಯಡಿಯೂರಪ್ಪ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಮೋದಿ ನಿಶ್ಚಿಯಿಸಿದ್ದಾರೆ.
ಆಗಸ್ಟ್ ಮೊದಲ ವಾರ ಕರ್ನಾಟಕಕ್ಕೆ ಭೇಟಿ ನೀಡಿ ಈ ಬಗ್ಗೆ ಅಂತಿಮ ನಿರ್ಣಯ ಪ್ರಕಟಿಸಲಿದ್ದಾರೆ ಎಂದು ಇಂಡಿಯಾ ಟುಡೇ ಹೇಳಿದೆ.
ಲೋಕ ಸಭೆ ಚುನಾವಣೆಯಲ್ಲಿ ಎನ್ ಡಿಎನಿಂದ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಆಯ್ಕೆಯಾದರೆ ಯಡಿಯೂರಪ್ಪ ಹಾಗೂ ಅವರ ಕೆಜೆಪಿ ಬೆಂಬಲಿಸುವ ಬಗ್ಗೆ ಸ್ಪಷ್ಟತೆ ಪಡೆಯಲಾಗುತ್ತಿದೆ.

ಪೇಜಾವರಶ್ರೀಗಳ ಎಂಟ್ರಿ
ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಸಂಸದ ಅನಂತಕುಮಾರ್ ಅವರ ಗುರುಗಳಾದ ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಯಡಿಯೂರಪ್ಪ ವಾಪಸ್ಸಾತಿಗೆ ಓಕೆ ಎಂದಿದ್ದಾರೆ.
ಪಕ್ಷ, ರಾಜ್ಯ ಹಾಗೂ ರಾಷ್ಟ್ರಕ್ಕೆ ಒಳ್ಳೆಯದಾಗುವುದಾದರೆ ಯಡಿಯೂರಪ್ಪ ಪಕ್ಷಕ್ಕೆ ಮರಳಿ ಕರೆತರಲು ನೇತೃತ್ವ ವಹಿಸಲೂ ತಾವು ಸಿದ್ಧ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಅನಂತ್- ಯಡಿಯೂರಪ್ಪ ಮಿಲನ
ಬದ್ದ ವೈರಿಗಳು ಎಂದು ಮಾಧ್ಯಮಗಳಲ್ಲಿ ಬಿಂಬಿತರಾಗಿರುವ ಸಂಸದ ಅನಂತಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾಜಿ ಸಚಿವರೊಬ್ಬರ ಮನೆಯಲ್ಲಿ ಗುಟ್ಟಾಗಿ ಮಾತುಕತೆ, ಸಂಧಾನ, ಸಿಹಿ ಹಂಚಿಕೆ ಕಾರ್ಯಕ್ರಮ ಮುಗಿಸಿದ್ದಾರೆ ಎಂಬ ಗಾಳಿ ಸುದ್ದಿ ಇದೆ.
ಅಡ್ವಾಣಿ ಒಪ್ಪದೆ, ಮೋದಿ ಒಪ್ಪಿದರೆ ಏನು ಮಾಡಬೇಕು ಎಂದ ದ್ವಂದ್ವದಲ್ಲಿ ಅನಂತ್ ಇದ್ದಾರೆ. ಏನಾಗುತ್ತೋ ಕಾದು ನೋಡಬೇಕಿದೆ.

ಒನ್ ಇಂಡಿಯಾ ಓದುಗರ ಅಭಿಮತ
ಯಡಿಯೂರಪ್ಪ ಬಿಜೆಪಿಗೆ ಮರಳಿ ಬರಬೇಕಾ, ಬೇಡವಾ? ಎಂಬ ಪ್ರಶ್ನೆಗೆ ಬಂದರೆ ಒಳ್ಳೆಯದು ಎಂಬ ಆಯ್ಕೆಗೆ ಹೆಚ್ಚಿನ ಮತಗಳು (ಶೇ.41ರಷ್ಟು) ಬಿದ್ದಿವೆ. ಬರುವುದು ಬೇಡ ಎಂಬ ಆಯ್ಕೆಗೆ ಶೇ.30ರಷ್ಟು ಮತಗಳು ಬಿದ್ದಿದ್ದು, ಏನಾದ್ರೂ ಮಾಡಿಕೊಳ್ಳಲಿ ಎಂಬ ಆಯ್ಕೆಗೆ ಶೇ.1ರಷ್ಟು ಕಡಿಮೆ ಮತಗಳು (ಶೇ.29) ಬಿದ್ದಿವೆ. [ಬಂದ್ರೂ ಬರ್ಲಿ, ಬಿಟ್ರೂ ಬಿಡ್ಲಿ]

ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ
ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸ್ ಬರಬೇಕು, ಅವರನ್ನು ವಾಪಸ್ ತರಬೇಕು ಎಂದು ಹಲವಾರು ನಾಯಕರು ನನಗೆ ಹೇಳಿದ್ದಾರೆ. ಈ ಸಂಗತಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರ ಮುಂದೆ ಇಡುತ್ತೇನೆ. ಬಿಜೆಪಿ ಹೈಕಮಾಂಡ್ ಈ ಕುರಿತು ಸ್ಪಷ್ಟ ನಿರ್ಣಯ ಸದ್ಯದಲ್ಲಿಯೇ ತೆಗೆದುಕೊಳ್ಳಲಿದೆ. ಈ ಬಗ್ಗೆ ಎರಡನೇ ಶ್ರೇಣಿಯ ನಾಯಕರು ಬಹಿರಂಗ ಹೇಳಿಕೆ ನೀಡಬಾರದು ಎಂದಿದ್ದಾರೆ.

ಎಲ್ಲರೂ ಓಕೆ ಹೇಳಿದ್ದಾರಾ?
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಬಹುತೇಕ ಯಡಿಯೂರಪ್ಪ ಅವರನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರು ತಾವೇ ಸ್ವತಃ ಬಿಜೆಪಿ ಬಿಟ್ಟಿದ್ದರು. ಈಗ ಅವರಿಂದಲೇ ಪಕ್ಷಕ್ಕೆ ಮರಳುವ ಬಗ್ಗೆ ಪ್ರಸ್ತಾವನೆ ಬರಬೇಕು. ಅದು ಬಂದನಂತರವಷ್ಟೇ ಬಿಜೆಪಿ ಸಂದದೀಯ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕರ್ನಾಟಕ ಉಸ್ತುವಾರಿ ತಾವರಚಂದ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ ಮೋದಿ ಕೈಲಿ ಯಡಿಯೂರಪ್ಪ ಭವಿಷ್ಯ ಅಡಗಿದೆ.












Click it and Unblock the Notifications