ಹಾರಂಗಿ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಸಂತಸ!
ಕೊಡಗು, ಜು.1 : ವರುಣ ದೇವನ ಕೃಪೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೊಡಗು ಜಿಲ್ಲೆಯ ಹಾರಂಗಿ ಡ್ಯಾಂ ಭರ್ತಿಯಾಗಿದೆ. ಭಾನುವಾರ ರಾತ್ರಿಯ ವೇಳೆಗೆ ಜಲಾಶಯದ ನೀರಿನ ಮಟ್ಟ 2856.73 ಅಡಿಗಳಿಗೆ ತಲುಪಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿ. ಆದರೆ, ಭದ್ರತಾದೃಷ್ಠಿಯಿಂದ 2 ಅಡಿ ಬಾಕಿ ಇರುವಾಗಲೇ ಹೆಚ್ಚುವರಿ ನೀರನ್ನು ಹೊರಬಿಡಲಾಗುವುದು ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಾಲನೇತ್ರಯ್ಯ ಹೇಳಿದ್ದಾರೆ.
ಸೋಮವಾರದಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುವುದು. ಆದ್ದರಿಂದ ಜಲಾಶಯದ ಕೆಲಭಾಗದ ಜನರು ಎಚ್ಚರ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಜಲಾಶಯಕ್ಕೆ 6507 ಕ್ಯುಸೆಕ್ ಒಳಹರಿವು ಹರಿದು ಬರುತ್ತಿದೆ ಎಂದು ಪಾಲನೇತ್ರಯ್ಯ ಹೇಳಿದ್ದಾರೆ.

ಸಿಎಂಗೂ ಮೊದಲು ಬಾಗಿನ : ಕಬಿನಿ ಜಲಾಶಯವೂ ಅವಧಿಗೂ ಮೊದಲೇ ಭರ್ತಿಯಾಗಿದ್ದು, ಮುಖ್ಯ ಮಂತ್ರಿಗಳಿಗಿಂತ ಮೊದಲು, ರೈತ ಮುಖಂಡರು ಜಲಾಶಯಕ್ಕೆ ಬಾಗಿನ ಸಮರ್ಪಿಸಿದ್ದಾರೆ. ಭಾನುವಾರ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಬಾಗಿನ ಅರ್ಪಿಸಿದರು.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿ. ಭಾನುವಾರ ಜಲಾಶಯದಲ್ಲಿ 79.50 ಅಡಿಗಳಷ್ಟು ನೀರು ಸಂಗ್ರಹಣೆಯಾಗಿತ್ತು. 6,300 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಜಲಾಶಯದ ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ.
ಕಬಿನಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ, ಕಂದಾಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮುಂತಾದವರು, ಜು.6ರಂದು ಬಾಗಿನ ಅರ್ಪಿಸಲಿದ್ದಾರೆ.
ರಾಜ್ಯದ ಇತರ ಜಲಾಶಯಗಳ ನೀರಿನ ಮಟ್ಟ
ಜಲಾಶಯ ಗರಿಷ್ಠ ಮಟ್ಟ ಇಂದಿನ ಮಟ್ಟ
ಕೆಆರ್ಎಸ್ 124.80 ಅಡಿ 90.90 ಅಡಿ
ಆಲಮಟ್ಟಿ 519.60 ಮೀ 511.05 ಮೀ
ಕಬಿನಿ 84 ಅಡಿ 79.50 ಅಡಿ
ಲಿಂಗನಮಕ್ಕಿ 1819 ಅಡಿ 1767.00 ಅಡಿ












Click it and Unblock the Notifications