ಎಚ್ಚರ! ಮಾಣಿ, ಕಲ್ಲಡ್ಕ ಪಟ್ಟಣ ಮಾಯವಾಗಲಿದೆ
ಬಂಟ್ವಾಳ, ಜೂ.24: ರಾಷ್ಟ್ರೀಯ ಹೆದ್ದಾರಿ 75ರ ಹಾಸನ-ಬಿ.ಸಿ.ರೋಡು ಹೆದ್ದಾರಿ ಚತುಷ್ಪಥ ರಸ್ತೆ ಮಾಡುತ್ತೇವೆ, ಶಿರಾಡಿ ಘಾಟಿಯಲ್ಲಿ ಸುರಂಗ ಕೊರೆಯುತ್ತೇವೆ ಎಂದು ಅರಣ್ಯ ಸಚಿವ ರಮಾನಾಥ ರೈ ಘೋಷಿಸಿದ್ದಾರೆ. ಸಚಿವರ ಮಾತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಲ ನಕ್ಷೆ ಎಲ್ಲವನ್ನು ನೋಡಿದರೆ ಮೆಲ್ಕಾರ್, ಕಲ್ಲಡ್ಕ, ಮಾಣಿ ಎಲ್ಲವೂ ನಕ್ಷೆಯಿಂದ ಮಾಯವಾಗಲಿದೆ.
ಹಾಸನ-ಬಿ.ಸಿ.ರೋಡು ಚತುಷ್ಟಥ ರಸ್ತೆಗಾಗಿ ಹೆದ್ದಾರಿ ಪ್ರಾಧಿಕಾರ ಖಾಸಗಿ ಸಂಸ್ಥೆ ಮೂಲಕ ಸಮೀಕ್ಷೆ ನಡೆಸಿ ಅಂತಿಮ ನಕ್ಷೆ ಸಿದ್ಧ ಪಡಿಸಿದೆ. ಬಂಟ್ವಾಳ ತಾಲೂಕಿನ ಮನೆಗಳು, ಸಾವಿರಾರು ಮರಗಳು, ಎಕರೆಗಟ್ಟಲೆ ಕೃಷಿಭೂಮಿ, ವಾಣಿಜ್ಯ ಕೇಂದ್ರಗಳು, ಪ್ರಮುಖ ಪೇಟೆಗಳು ಕೂಡ ಹೊಸ ಚತುಷ್ಪಥಕ್ಕೆ ಬಲಿಯಾಗುವ ಭೀತಿ ಎದುರಿಸುತ್ತಿವೆ.
ಹಾಸನದಿಂದ ಬಿ.ಸಿ.ರೋಡು ವರೆಗಿನ 128 ಕಿ.ಮೀ. ಹೆದ್ದಾರಿ ರಸ್ತೆಯನ್ನು ಚತುಷ್ಪಥಗೊಳಿಸುವ ಬೃಹತ್ ಯೋಜನೆಗೆ ಕಳೆದ ಕೆಲವು ವರ್ಷಗಳ ಹಿಂದೆಯೇ ಯೋಜನೆ ಸಿದ್ಧಪಡಿಸಲಾಗಿದೆ. ಅನುಷ್ಠಾನದ ಹಂತದಲ್ಲಿರುವ ಈ ಯೋಜನೆಯ ಮೊದಲ ಹಂತದ ಸರ್ವೇಕಾರ್ಯ ಮುಗಿಸಲಾಗಿದೆ.

ಹಾಸನದಿಂದ ಸಕಲೇಶಪುರದ ವರೆಗಿನ ಭೂ ಸ್ವಾಧೀನ ಪ್ರಕ್ರಿಯೆ ನಡೆಸುತ್ತಿದೆ. ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿಯನ್ನೇ ಅಗಲಿಸುವ ಮೂಲಕ ಚತುಷ್ಪಥ ಹೆದ್ದಾರಿ ನಿರ್ಮಾಣಗೊಳ್ಳಲಿದೆ. ಚತುಷ್ಪಥದ ನಿಯಮದಂತೆ ರಸ್ತೆಯ ಮಧ್ಯಭಾಗದಿಂದ ಇಕ್ಕೆಲಗಳಲ್ಲಿ 22.5 ಮೀಟರ್ ನಂತೆ ಒಟ್ಟು 45 ಮೀಟರ್ ಅಗಲದ ಜಮೀನನ್ನು ಪ್ರಾಧಿಕಾರ ಸ್ವಾಧೀನ ಪಡಿಸಿಕೊಳ್ಳಲಿದೆ.
ಹಾಸನ-ಬಿ.ಸಿ.ರೋಡು ಚತುಷ್ಪಥಕ್ಕಾಗಿ ಹೆದ್ದಾರಿಯನ್ನು ಅಗಲೀಕರಣಗೊಳಿಸುವ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ನಡೆಸಿದ ಸರ್ವೇ ಕಾರ್ಯ, ನಕ್ಷೆ, ನೋಟಿಸ್ ಜಾರಿಯಂತಹ ಪ್ರಕ್ರಿಯೆಗಳು ಜನತೆಯ ಆತಂಕಕ್ಕೆ ಕಾರಣವಾಗಿದೆ.
ಪ್ರಾಧಿಕಾರ ಈಗಾಗಲೇ ತಮ್ಮ ಸರ್ವೇ ಕಾರ್ಯದ ನಕ್ಷೆಯೊಳಗೆ ಬಿದ್ದಿರುವ ಖಾಸಗಿ ಜಮೀನು, ವಾಸ್ತವ್ಯದ ಮನೆಗಳು ಹಾಗೂ ಕಟ್ಟಡಗಳ ಮಾಲಕರಿಗೆ ನೊಟೀಸ್ ಜಾರಿ ಮಾಡಿದೆ. ಆಕ್ಷೇಪಣೆಗಳಿದ್ದರೆ ಪರಿಹಾರ ಒದಗಿಸುವ ಭರವಸೆಯನ್ನೂ ನೀಡಿದೆ.
ಬಂಟ್ವಾಳ ತಾಲೂಕಿನಲ್ಲಿ ನಡೆದಿರುವ ಸರ್ವೇ ಕಾರ್ಯದ ನಕ್ಷೆಯಂತೆ ಮೆಲ್ಕಾರ್ ಪೇಟೆಯ ಸ್ವರೂಪವೇ ಬದಲಾಗಲಿದೆ.ಕಲ್ಲಡ್ಕದ ಕೆಳಗಿನ ಪೇಟೆಯ ಬಸ್ ನಿಲ್ದಾಣ, ಬಹುತೇಕ ಅಂಗಡಿಗಳು, ಕಟ್ಟಡಗಳು, ಮನೆಗಳು ನೆಲಸಮವಾಗಲಿದೆ. ಮಾಣಿ ಪೇಟೆಯಲ್ಲಿರುವ ಶಾಲೆ, ಅಂಗಡಿ ಕಟ್ಟಡಗಳು, ಸಂತೆ ಕಟ್ಟಡ, ಹಳೆ ಗ್ರಾಪಂ ಕಚೇರಿ ಕಟ್ಟಡಗಳು ಚತುಷ್ಪಥದಲ್ಲಿ ಮರೆಯಾಗುವ ಭೀತಿಯಲ್ಲಿದೆ.
ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಕಳೆದ ಮಾ.27ರಂದು ನೋಟಿಫಿಕೆಶನ್ ಹೊರಡಿಸಿದ್ದು, ಜೊತೆಜೊತೆಗೆ ಜಮೀನು, ಕಟ್ಟಡಗಳ ಮಾಲಕ ರಿಗೂ ನೊಟೀಸ್ ಜಾರಿ ಮಾಡಿ ಆಕ್ಷೇಪಣೆ ಗಳಿದ್ದರೆ ಸಲ್ಲಿಸುವಂತೆ 21 ದಿನಗಳ ವಾಯಿದೆಯನ್ನು ನೀಡಿತ್ತು. ವಾಯಿದೆಯೊಳಗೆ ಆಕ್ಷೇಪಣೆ ಸಲ್ಲಿಸಿದವರನ್ನು ಹಾಸನಕ್ಕೆ ಕರೆಯಿಸಿ ಅಹವಾಲು ಸ್ವೀಕರಿಸಿದೆ. ವಾಯಿದೆ ಕಳೆದ ಬಳಿಕ ಆಕ್ಷೇಪಣೆ ಸಲ್ಲಿಸಿದವರ ಅರ್ಜಿಗಳಿಗೆ ‘ವಿಲೇ ಇಡಲಾಗಿದೆ' ಎಂಬ ಹಿಂಬರಹವನ್ನೂ ಪ್ರಾಧಿಕಾರ ನೀಡಿದೆ.
ಮಳೆಗಾಲ ಮುಗಿದ ಮೇಲೆ ದಕ್ಷಿಣ ಕನ್ನಡದ ರಸ್ತೆಗಳ ಆಪರೇಷನ್ ಶುರುವಾಗಲಿದೆ. ಹಾಸನ -ಬಂಟ್ವಾಳ ರಸ್ತೆ ನಂತರ ಮೂಡಬಿದರೆ- ಶಿವಮೊಗ್ಗ ರಸ್ತೆ ಚತುಷ್ಪಥವಾಗಲಿದೆ. ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ಮುಲ್ಕಿ, ಬಿಸಿ ರೋಡು ವಯಾ ಬಜ್ಪೆ ಮಾರ್ಗ ಸೂಚಿಸಲಾಗುತ್ತದೆ.












Click it and Unblock the Notifications