ಚಿತ್ರಸುದ್ದಿಗಳಲ್ಲಿ : ಪ್ರವಾಹ, ಪರಿಹಾರ, ಅಡ್ವಾಣಿ, ಮೋದಿ
ಬೆಂಗಳೂರು, ಜೂ.22: ಉತ್ತರ ಭಾರತದಲ್ಲಿ ಪ್ರವಾಹಕ್ಕೆ ಸಿಲಿಕಿರುವ ಯಾತ್ರಿಕರಿಗಾಗಿ ಅಗತ್ಯ ವಸ್ತುಗಳನ್ನು ಹೊತ್ತು ಹೊರಟ ಲಾರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಚಾಲನೆ ನೀಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿತು.
ಮುಂಬೈನ ಥಾಣೆ ಪ್ರದೇಶದಲ್ಲಿ ಒಂದು ತಿಂಗಳಿನಲ್ಲಿ ಮೂರನೇ ಕಟ್ಟಡ ದುರಂತ ಸಂಭವಿಸಿದೆ. ಶುಕ್ರವಾರ ನಸುಕಿನ ಜಾವ ಕಟ್ಟಡ ಕುಸಿದು ಬಿದಿದ್ದರಿಂದ 10 ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಉತ್ತರ ಖಂಡ್ ರಾಜ್ಯದ ಮಳೆ ಮತ್ತು ಪ್ರವಾಹದ ಭೀಕರತೆ ಎಷ್ಟಿತ್ತು ಎಂಬುದಕ್ಕೆ ಒಂದು ಸೇತುವೆಯೇ ಉದಾಹರಣೆಯಾಗಿದೆ. ಜೋಶಿಮಠದ ಬಳಿ ಪ್ರವಾಹಕ್ಕೆ ಸಿಲುಕಿದ ಸೇತುವೆ ಸಂಪೂರ್ಣವಾಗಿ ನಾಶವಾಗಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಮನಃಶಾಂತಿಗಾಗಿ ಯೋಗದ ಮೊರೆಹೋದ ನ್ಯೂಯಾರ್ಕ್ ನಗರದ ಜನರು, ಪ್ರವಾಹ ಸಂತ್ರಸ್ತರನ್ನು ರಕ್ಷಿಸಲು ಸೇನಾಪಡೆಯವರ ಶ್ರಮ, ರಾಜಸ್ಥಾನದ ಅಂಬರ ಕೋಟೆ ಮುಂತಾದ ಸುದ್ದಿಗಳು ಚಿತ್ರಗಳಲ್ಲಿ.

ಪರಿಹಾರ ಬೇಗ ತಲುಪಲಿ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉತ್ತರ ಭಾರತದ ಪ್ರವಾಹ ಸಂತ್ರಸ್ತರಿಗೆ ಕಳುಹಿಸುತ್ತಿರುವ ಪರಿಹಾರದ ವಸ್ತುಗಳನ್ನು ಹೊತ್ತ ಲಾರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂನಬಿ ಆಜಾದ್ ಚಾಲನೆ ನೀಡಿದರು.

ಕುಸಿದು ಬಿತ್ತು ಮತ್ತೊಂದು ಕಟ್ಟಡ
ಮುಂಬೈನ ಥಾಣೆ ಪ್ರದೇಶದಲ್ಲಿ ಮತ್ತೊಂದು ಕಟ್ಟಡ ಕುಸಿದು ಬಿದಿದ್ದು, 10 ಜನರು ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ಜೂನ್ ತಿಂಗಳಿನಲ್ಲಿ ಮೂರು ಕಟ್ಟಡಗಳು ಕುಸಿದು ಬಿದ್ದಿವೆ.

ಮನಃಶಾಂತಿಗಾಗಿ ಯೋಗ
ನ್ಯೂಯಾರ್ಕ್ ನಗರದ ಟೈಮ್ ವೃತ್ತದಲ್ಲಿ ಶುಕ್ರವಾರ ವಾರ್ಷಿಕ ಬೃಹತ್ ಯೋಗ ಶಿಬಿರ ನಡೆಯಿತು. ಈ ವೃತ್ತದಲ್ಲಿ ಹನ್ನೊಂದನೇ ವರ್ಷ ಯೋಗ ತರಗತಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಮನಃಶಾಂತಿಗಾಗಿ ಯೋಗ ಹೆಸರಿನಲ್ಲಿ ಈ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರವಾಹದ ಭೀಕರತೆ
ಉತ್ತರಖಂಡ್ ರಾಜ್ಯದ ಪ್ರವಾಹದ ಭೀಕರತೆಗೆ ಜೋಗಿಮಠ ಪ್ರದೇಶದ ಈ ಸೇತುವೆ ಸಾಕ್ಷಿಯಾಗಿ ನಿಂತಿದೆ. ಪ್ರವಾಹಸ ಅಬ್ಬರಕ್ಕೆ ಸಿಲುಕಿ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.

ನೆರವಿನ ಹಸ್ತ
ಉತ್ತರ ಖಂಡ್ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರಿಗಾಗಿ ಸೇನಾ ಯೋಧರು ಪರಿಹಾರ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿರುವುದು. ಮಳೆ ನಿಂತಿದ್ದರೂ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಲೇ ಇದೆ.

ಕ್ಯಾಮರಾ ಕಣ್ಣಿನಲ್ಲಿ ಅಂಬರ್ ಕೋಟೆ
ಜೈಪುರದ ಅಂಬರ್ ಕೋಟೆ ಕ್ಯಾಮರಾ ಕಣ್ಣಿಗೆ ದೊರಕಿರುವುದು ಹೀಗೆ. ರಾಜಸ್ಥಾನದ ಪರ್ವತ ಪ್ರದೇಶದಲ್ಲಿರುವ ಏಳು ಕೋಟೆಗಳಲ್ಲಿ ಇದು ಒಂದು. ಯುನೆಸ್ಕೋನಿಂದ ಸಂರಕ್ಷಿತ ಪ್ರದೇಶ ಎಂಬ ಮಾನ್ಯತೆಯನ್ನು ಈ ಕೋಟೆ ಪಡೆದಿದೆ.

ಅಡ್ವಾಣಿ ಮುನಿಸು?
ಇತ್ತೀಚೆಗೆ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿ ಸುದ್ದಿಯಾಗಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೊಡನೆ ಮುನಿಸಿಕೊಂಡಿದ್ದಾರೆಯೇ? ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಡ್ವಾಣಿ ಮತ್ತು ರಾಜನಾಥ್ ಸಿಂಗ್ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ನಮ್ಮ ಸರದಿ ಯಾವಾಗ?
ಗೌರಿ ಖಂಡ್ ಪ್ರದೇಶದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೇವಾ ಹೆಲಿಕಾಪ್ಟರ್ ಗಾಗಿ ಸರತಿ ಸಾಲಿನಲ್ಲಿ ಕಾದು ಕುಳಿತ ಪ್ರವಾಹ ಸಂತ್ರಸ್ತರು.

ಬ್ಯಾಗ್ ಮೇಲೆ ಮೋದಿ ಮೋಡಿ!
ವಡೋದರಾದಲ್ಲಿ ಶಾಲಾ ಮಕ್ಕಳಿಗೆ ಗುಜರಾತ್ ಸರ್ಕಾರ ವಿತರಿಸುವ ಬ್ಯಾಗ್ ಮೇಲೆ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ಚಿತ್ರಗಳು ರಾರಾಜಿಸುತ್ತಿವೆ. ಮಕ್ಕಳನ್ನು ಶಾಲೆಗೆ ಸೆಳೆಯಲು ಗುಜರಾತ್ ಸರ್ಕಾರ ಪ್ರತಿವರ್ಷ ಇಂತಹ ಕಿಟ್ ವಿತರಣೆ ಮಾಡುತ್ತದೆ. ಇದರಲ್ಲಿ ಪೆನ್, ಪೆನ್ಸಿಲ್, ಜಾಮೆಟ್ರಿ, ಪುಸ್ತಕಗಳು ಇರುತ್ತವೆ.

ಕೆನಡಾದಲ್ಲೂ ಪ್ರವಾಹ
ಭಾರತ ಮಾತ್ರವಲ್ಲ ಕೆನಡಾ ಮತ್ತು ಚೀನಾ ದೇಶಗಳು ಸಹ ಪ್ರವಾಹದಿಂದ ತತ್ತರಿಸಿ ಹೋಗಿವೆ. ಕೆನಡಾದ ಟ್ರಾನ್ಸ್ ಕೆನಡಾ ಹೆದ್ದಾರಿ ವರುಣನೆ ಕೋಪಕ್ಕೆ ತುತ್ತಾಗಿ ಹೇಗಾಗಿದೆ ನೋಡಿ.












Click it and Unblock the Notifications