ವಿಮಾನದಲ್ಲಿ ಬಂದು ಸರ ಕದಿಯುತ್ತಿದ್ದರು!

ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಡೌಕಿ ಪೋಸ್ಟ್ ನಿವಾಸಿಗಳಾದ ವಿಕ್ಕಿ ಸಿಂಗ್ ಅಲಿಯಾಸ್ ವಿಕ್ಕಿ (33), ವಿಶಾಲ್ ಸಿಂಗ್ ಅಲಿಯಾಸ್ (23) ಬಂಧಿತರು. ಇವರು, 15 ದಿನಕ್ಕೊಮ್ಮೆ ವಿಮಾನದಲ್ಲಿ ನಗರಕ್ಕೆ ಆಗಮಿಸಿ, ಕಳ್ಳತನ ಮಾಡಿ ಪುನಃ ವಿಮಾನದಲ್ಲೇ ಮರಳುತ್ತಿದ್ದರು.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಕಮಲ್ ಪಂತ್, ಹೈಟೆಕ್ ಕಳ್ಳರ ಕುರಿತು ಮಾಹಿತಿ ನೀಡಿದರು. ಈ ಕಳ್ಳರು ನಗರದಲ್ಲಿ ತಮ್ಮದೊಂದು ಬೈಕ್ ಹೊಂದಿದ್ದರು. ಅದನ್ನು ಕೆಎಎಸ್ ಆರ್ ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಿ ವಿಮಾನ ಹತ್ತುತ್ತಿದ್ದರು.
ಕಳ್ಳತನ ಹೇಗೆ : ಪ್ರತಿ 15 ದಿನಕ್ಕೊಮ್ಮೆ ನಗರಕ್ಕೆ ಆಗಮಿಸುತ್ತಿದ್ದ ಇವರು, ಮೆಜೆಸ್ಟಿಕ್‌ಗೆ ಮೊದಲು ಆಗಮಿಸಿ ನಂತರ ಬೈಕ್ ಮೂಲಕ ತೆರಳಿ, ಶಿವಾಜಿನಗರದ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ಬೈಕ್ ಮೂಲಕ ನಗರ ಸುತ್ತಿ, ಒಂಟಿ ಮಹಿಳೆಯರ ಸರ ಅಪಹರಿಸಿ, ಕದ್ದಮಾಲಿನೊಂದಿಗೆ ವಿಮಾನವೇರುತ್ತಿದ್ದರು.
ನಗರದಲ್ಲಿ ಸುಮಾರು ಮೂರು ದಿನ ತಂಗುತಿದ್ದ ಇವರು ಕೈಗೆ ಸಿಕ್ಕಷ್ಟು ಸರ ದೋಚಿ, ಅದನ್ನು ದೆಹಲಿ ಮತ್ತು ಅಗ್ರಾದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಕಮಲ್ ಪಂತ್ ಹೇಳಿದ್ದಾರೆ. ಸರಗಳ್ಳತನದ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ವಿಶೇಷ ತಂಡಕ್ಕೆ ಖದೀಮರು ಸಿಕ್ಕಿಬಿದ್ದಿದ್ದಾರೆ.
ಸಿಸಿಟಿವಿ ಮೂಲಕ ಸೆರೆ : ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ಪಾರ್ಕಿಂಗ್‌ನಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು, ಮುಂಬೈ ನೋಂದಾಣಿ ಪಲ್ಸರ್ ಬೈಕ್ ಪತ್ತೆಹಚ್ಚಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ, 15 ದಿನಕ್ಕೊಮ್ಮೆ ಇಬ್ಬರು ವ್ಯಕ್ತಿಗಳು ಬೈಕ್ ತೆಗೆದುಕೊಂಡು ಹೋಗುತ್ತಾರೆ ಎಂಬ ಮಾಹಿತಿ ಸಿಕ್ಕಿದೆ.
ಮುಂದಿನ ಬಾರಿ ಬೈಕ್ ತೆಗೆದುಕೊಂಡು ಹೋದರೆ, ಮಾಹಿತಿ ನೀಡಿ ಎಂದು ಪೊಲೀಸರು ಪಾರ್ಕಿಂಗ್ ಸಿಬ್ಬಂದಿಗೆ ಸೂಚಿಸಿದ್ದಾರೆ. ಸೋಮವಾರ ಯುವಕರು ನಿಲ್ಲಿಸಲು ಬಂದಾಗ, ಪೊಲೀಸರು ಅವರನ್ನು ಬಂಧಿಸಿದ್ದಾರೆ, ವಿಚಾರಣೆ ನಡೆಸಿದಾಗ ಕಳ್ಳರ ಗುಟ್ಟು ರಟ್ಟಾಗಿದೆ.
ಫ್ಯಾನ್ ನಲ್ಲಿ ಚಿನ್ನ : ಕದ್ದ ಚಿನ್ನವನ್ನು ಹೋಟೆಲ್ ರೂಂನ ಫ್ಯಾನ್ ನೊಳಗೆ ಬಚ್ಚಿಟ್ಟಿದ್ದು ತನಿಖೆಯಿಂದ ತಿಳಿದು ಬಂದಿದೆ. ಇಬ್ಬರು ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಯಗಳಲ್ಲಿ 22 ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣವ ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications