ಮೋದಿಯ ಕೈಬಿಟ್ಟರೆ ಮಾತ್ರ ಸಖ್ಯ ಮುಂದುವರಿಕೆ: ಜೆಡಿಯು

ಆದರೆ 17 ವರ್ಷಗಳ ಬಾಂಧವ್ಯಕ್ಕೆ ಬಿಜೆಪಿ ಸಖ್ಯ ಬಹುತೇಕ ಮುರಿದುಬೀಳು ಹಂತಕ್ಕೆ ಬಂದಿದ್ದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅವರು ಬಿಜೆಪಿಗೆ ಅಪಥ್ಯವೆನಿಸುವ ಷರತ್ತನ್ನು ವಿಧಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಖಂಡತುಂಡವಾಗಿ ಬಿಜೆಪಿ ಘೋಷಿಸಬೇಕಂತೆ. ಹಾಗಾದರೆ ಮಾತ್ರ ಬಿಜೆಪಿ ಸಹವಾಸ ಮುಂದುವರಿಯುತ್ತದೆ. ಇಲ್ಲವಾದಲ್ಲಿ ನಿಮ್ಮ ದಾರಿ ನಿಮಗೆ ನಮ್ಮ ಹಾದಿ ನಮಗೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ, ಮೋದಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಸಾರ್ವಜನಿಕವಾಗಿ ಬಿಜೆಪಿ ಘೋಷಿಸದೇ ಹೋದರೆ ಈಗ ನಡೆಯುತ್ತಿರುವ ಜೆಡಿಯು ಕಾರ್ಯಕಾರಿಣಿ ಸಭೆಯಲ್ಲೇ ಬಿಜೆಪಿಯಿಂದಬೇರೆಯಾಗುವುದನ್ನು ಜೆಡಿಯು ಘೋಷಿಸುವ ಸಾಧ್ಯತೆ ನಿಚ್ಚಳವಾಗಿದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ವಾಪಸಾಗಲು ಮತ್ತು ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಪಕ್ಷವು ಒಂದು ವಾರದ ಹಿಂದೆ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಅರ್ಥಾತ್ ಭಾವಿ ಪ್ರಧಾನಿ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಘೋಷಿಸಿರುವುದು ನಿತೀಶ್ ಜೆಡಿಯುಗೆ ಸಹಿಸಲಾಗಿಲ್ಲ. ಹಾಗಾಗಿ ತಕ್ಷಣ ವರಾತ ತೆಗೆದಿದ್ದಾರೆ. JD(U) ಅಧ್ಯಕ್ಷ ಶರದ್ ಯಾದವ್ ಸಹ ಇದೇ ರಾಗ ಹಾಡುತ್ತಿದ್ದಾರೆ.
ಈ ಮಧ್ಯೆ, ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿ ಅವರು ಜೆಡಿಯು ನಾಯಕರ ಸಂಪರ್ಕದಲ್ಲಿದ್ದು, ಆ ಕಂಡೀಷನ್ನೊಂದು ಬಿಟ್ಟು ಬೇರೆ ಏನನ್ನಾದರೂ ಕೇಳಿ ತಥಾಸ್ತು ಅನ್ನುತ್ತೇವೆ. ನಮ್ಮ ಸಂಘ ಬಿಡಬೇಡಿ ಎಂದು ಅಲವತ್ತುಕೊಂಡಿದ್ದಾರೆ.












Click it and Unblock the Notifications