ಹುಬ್ಬಳ್ಳಿ-ಧಾರವಾಡ ನಡುವೆ 4,000 ಸಸಿ ನೆಡಿ

Posted By:
Subscribe to Oneindia Kannada
Petition to plant trees along Hubballi-Dharwad highway
ಹುಬ್ಬಳ್ಳಿ, ಜೂ. 4 : ನಾಲ್ಕು ಸಾವಿರ ಸಸಿಗಳನ್ನು ನೆಡುವುದಾಗಿ ನೀಡಿದ ವಾಗ್ದಾನವನ್ನು ಮರೆತ ಸರಕಾರದ ವಿರುದ್ಧ ಸಿಡಿದೆದ್ದಿರುವ ಹುಬ್ಬಳ್ಳಿ-ಧಾರವಾಡದ ಪರಿಸರ ಪ್ರೇಮಿ ನಾಗರಿಕರು, ಜೂನ್ 5 ಪರಿಸರ ದಿನಾಚರಣೆಯಂದು ಪಾದಯಾತ್ರೆ ಕೈಗೊಂಡು ಪ್ರತಿಭಟನೆ ನಡೆಸಲಿದ್ದಾರೆ.

ಬಿಆರ್‌ಟಿಎಸ್ (Bus Rapid Transit System) ಯೋಜನೆಯ ಅಂಗವಾಗಿ ಹುಬ್ಬಳ್ಳಿ-ಧಾರವಾಡದ ನಡುವೆ ರಸ್ತೆ ಅಗಲೀಕರಣ ಮಾಡಿ ಎಂಟು ಪಥಗಳ ರಸ್ತೆ ನಿರ್ಮಾಣ ಮಾಡಬೇಕೆಂದು 2,000ಕ್ಕೂ ಹೆಚ್ಚು ಮರಗಳನ್ನು ಮೂರು ವರ್ಷಗಳ ಹಿಂದೆ ಕತ್ತರಿಸಿ ಹಾಕಲಾಗಿತ್ತು. ಇದಕ್ಕೆ ಪ್ರತಿಯಾಗಿ 4,000 ಮರಗಳನ್ನು ನೆಡುವ ಭರವಸೆಯನ್ನೂ ನೀಡಲಾಗಿತ್ತು. ಆದರೆ, ಈಗ ಆ ಭರವಸೆ ಬರೀ ಭರವಸೆಯಾಗಿ ಉಳಿದಿರುವುದು ನಾಗರಿಕರನ್ನು ರೊಚ್ಚಿಗೆಬ್ಬಿಸಿದೆ.

ನೂರಾರು ವರ್ಷಕ್ಕಿಂತ ಹಳೆಯದಾದ ಆಲದ ಮರ, ಹುಣಸೆ ಮರ, ಮಾವಿನ ಮರ, ಬೇವಿನ ಮರಗಳನ್ನು ಕತ್ತರಿಸಿ ಹಾಕಿದ್ದಲ್ಲದೆ, ಪರಿಸರ ಹಾಳಾಗುವಂತೆ ಸರಕಾರ ನಡೆದುಕೊಂಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮರಗಳನ್ನು ನೆಡಲೇಬೇಕೆಂದು ಆಗ್ರಹಿಸಿ change.org ವೆಬ್ ಸೈಟ್ ನಲ್ಲಿ ಸಂತೋಷ್ ನರಗುಂದ ಎಂಬುವವರು ಅರ್ಜಿ ಹಾಕಿದ್ದಾರೆ. 13 ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿ ನೆಟ್ಟಿಗರು ಇದನ್ನು ಬೆಂಬಲಿಸಿದ್ದಾರೆ.

ಈ ಅಹವಾಲನ್ನು ತೆಗೆದುಕೊಂಡು ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಕಚೇರಿಗೆ ಸಂತೋಷ್ ನರಗುಂದ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಅರಣ್ಯ ಇಲಾಖೆಯ ವರಿಷ್ಠಾಧಿಕಾರಿ ಇಂದು ಬಿ. ಶ್ರೀವಾಸ್ತವ, ಡಿಯುಎಲ್‌ಟಿ ಕಮಿಷನರ್ ಮಂಜುಳಾರಿಗೂ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ. ಸಂಬಂಧಿತ ಇಲಾಖೆಗಳು ಒಬ್ಬರನ್ನೊಬ್ಬರು ದೂರುತ್ತಿವೆಯೇ ಹೊರತು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಜನರ ಆಕ್ರೋಶ.

ಹಲವಾರು ಸರಕಾರೇತರ ಸಂಘಟನೆಗಳು, ಅವಳಿ ನಗರದ ನಾಗರಿಕರು, ಜನಪ್ರತಿನಿಧಿಗಳು, ಪರಿಸರವಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಸಿಗಳನ್ನು ನೆಡಲು ಜಾಗವನ್ನು ಗುರುತಿಸಿ ನಂತರ ಸಸಿ ನೆಡುವುದಾಗಿ ಅರಣ್ಯ ಇಲಾಖೆ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರಾದರೂ ಅವರು ಯಾವುದೇ ಕಾಲಮಿತಿಯನ್ನು ಹೇಳಿಲ್ಲ. ಪರಿಸರ ಉಳಿಸಲು ಸಸಿ ನೆಡುವ ಕಾರ್ಯಕ್ರಮವನ್ನು ಕೂಡಲೆ ಕಾರ್ಯರೂಪಕ್ಕೆ ತರಬೇಕು ಎಂದು ಸಂತೋಷ್ ನರಗುಂದ ಅವರು ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Thousands of nature lovers will be marching on World Environment Day (June 5) to plant 4,000 trees along Hubballi-Dharwad highway. More than 2,000 trees were killed by govt to widen road 3 years ago. But, so far not even a single tree has been planted as per rule.
Please Wait while comments are loading...