ಮೈಸೂರು: ನೀರಿನ ಸಮಸ್ಯೆಗೆ ತಾತ್ಕಾಲಿಕ ರಿಲೀಫ್

ಆದರೆ, ಉತ್ತಮ ಮಳೆಯಾದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಇಲ್ಲದಿದ್ದರೆ ನೀರಿನ ಹಾಹಾಕಾರ ಮತ್ತೆ ಶುರುವಾಗಲಿದೆ. ಕಳೆದ ವರ್ಷ ಮುಂಗಾರು ವಿಫಲಗೊಂಡು ಸಕಾಲಕ್ಕೆ ಕೆಆರ್ಎಸ್ ಜಲಾಶಯ ಭರ್ತಿಯಾಗಿರಲಿಲ್ಲ ಅಲ್ಲದೆ, ತಮಿಳುನಾಡಿಗೆ ನೀರು ಹರಿದು ಬಿಟ್ಟ ಪರಿಣಾಮ ಜಲಾಶಯದ ನೀರಿನ ಮಟ್ಟದ 60 ಅಡಿಗೆ ಕುಸಿದಿತ್ತು. ಪರಿಣಾಮ ಮೈಸೂರು, ಬೆಂಗಳೂರು ಸೇರಿದಂತೆ ಹಲವು ಭಾಗಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಈಗ ಅದೇ ಪರಿಸ್ಥಿತಿ ಎದುರಾಗುವ ಭೀತಿಯಿದೆ.
ಪ್ರತಿನಿತ್ಯ 90 ಎಂಎಲ್ ಡಿಯಷ್ಟು ನೀರು ಹೊಂಗಳ್ಳಿ ಪಂಪ್ ಸ್ಟೇಷನ್ ನಿಂದ ಬರಬೇಕಿತ್ತು. ಬೆಳಗೊಳ ಪಂಪ್ ಸ್ಟೇಷನ್ ನಿಂದ 40 ಎಂಎಲ್ ಡಿ ಮಾತ್ರ ಸಿಗುತ್ತಿದೆ. ಹೊಂಗಳ್ಳಿ 2ನೆ ಹಂತದಿಂದ 32 ಎಂಎಲ್‌ಡಿ, 3ನೆ ಹಂತದಿಂದ 54 ಎಂಎಲ್‌ಡಿ ದೊರೆಯುತ್ತಿದ್ದ ನೀರು 40 ಎಂಎಲ್‌ಡಿ ಇಳಿಮುಖವಾಗಿದೆ. ಬೆಳಗೊಳ, ಮೇಳಾಪುರದ ಪಂಪ್ ಸ್ಟೇಷನ್ ನಿಂದ 200 ಎಂಎಲ್ ಡಿ ನೀರು ಮಾತ್ರ ಸಿಗುತ್ತಿದೆ ಎಂದು ನಗರಪಾಲಿಕೆ ಆಯುಕ್ತ ಪಿ.ಜಿ.ರಮೇಶ್ ಅವರು ವಿವರಿಸಿದ್ದಾರೆ.
ಕುಡಿಯುವ ನೀರಿನ ತೀವ್ರ ಸಂಕಷ್ಟವನ್ನು ಮನಗಂಡ ಆಯುಕ್ತರು, ಸಂಕಷ್ಟ ಎದುರಿಸುತ್ತಿರುವ ಪ್ರದೇಶಗಳಿಗೆ ಐದು ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕೃಷ್ಣರಾಜದಲ್ಲೂ ನೀರಿನ ಬರ: ಈ ನಡುವೆ, ನಗರ ವ್ಯಾಪ್ತಿಯ ಕೃಷ್ಣರಾಜ ಕ್ಷೇತ್ರದಲ್ಲೂ ಕುಡಿಯುವ ನೀರಿಗೆ ತೀವ್ರ ದುಸ್ಥರ ಉಂಟಾಗಿದೆ. ಮಂಗಳವಾರ ಹೇಮಾವತಿಯಿಂದ 1,528 ಕ್ಯೂಸೆಕ್ಸ್ ನೀರು ಕೆ ಆರ್ ಎಸ್ ಜಲಾಶಯ ತಲುಪಿದೆ. ಇದರಿಂದ ನೀರಿನ ಮಟ್ಟ ಕೇವಲ 6 ಇಂಚು ಹೆಚ್ಚಿತ್ತು.
ಈಗ 2 ಟಿಎಂಸಿ ಅಡಿ ನೀರು ಬಂದಿರುವುದು ತಾತ್ಕಾಲಿಕ ಪರಿಹಾರ ಸಿಕ್ಕಿದ್ದಂತಾಗಿದೆ. ಹೇಮಾವತಿಯಿಂದ ಇನ್ನಷ್ಟು ನೀರು ನಿರೀಕ್ಷಿಸಲಾಗಿದೆ. ಪಂಪಿಂಗ್ ಸ್ಟೇಷ್ಟನ್ ನ ಲೋಪ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ ಶಿಖಾ ಅವರು ಹೇಳಿದ್ದಾರೆ.
ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 66.55 ಅಡಿಗೆ ಏರಿಕೆಯಾಗಿದ್ದು, ಒಳ ಹರಿವು 3331 ಕ್ಯೂಸೆಕ್ ನೀರು ದಾಖಲಾಗಿದೆ. ಹೊರ ಹರಿವನ್ನೂ ನಿಯಂತ್ರಿಸಲಾಗಿದ್ದು, 997 ಎಂಎಲ್ ಡಿ ನೀರಿನಿಂದ 780 ಎಂಎಲ್ ಡಿಗೆ ಇಳಿಸಲಾಗಿದೆ.
ಕೆಆರ್ ಎಸ್ ಜಲಾಶಯದ ನೀರಿನ ಹರಿವು ಕುರಿತು ಸಮೀಕ್ಷೆಗೆ ಆಗಮಿಸಿದ್ದ ಕೆ.ಆರ್. ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅವರು ಮಾತನಾಡಿ, ರೈತರ ಪೈಪ್ ಲೈನ್ ಗಳಿಂದ ನೀರುನ್ನು ಕದ್ದು ಬಳಕೆ ಮಾಡುತ್ತಿದ್ದಾರೆ ಎಂಬ ದೂರುಗಳು ಇರುವುದರಿಂದ ಎಲ್ಲ ನೀರು ಪಂಪ್ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.












Click it and Unblock the Notifications