ಆಪರೇಷನ್ ಹಸ್ತ ಮಾಡೋಲ್ಲ : ಪರಮೇಶ್ವರ್

ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತಗಳಿಸಿ, ಸರಕಾರ ರಚನೆ ಮಾಡಲಿದೆ ಎಂಬ ವಿಶ್ವಾಸವಿದೆ.
ಬಹುಮತ ದೊರೆಯದಿದ್ದರೆ, ಅಧಿಕಾರ ಪಡೆಯಲು ಬಿಜೆಪಿಯಂತೆ, ಶಾಸಕರನ್ನು ಖರೀದಿಸುವ ಆಪರೇಷನ್ ಕಮಲ ದಂತಹ ಕೃತ್ಯಕ್ಕೆ ಕಾಂಗ್ರೆಸ್ ಕೈ ಹಾಕುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇವೆ, ಅದರಂತೆ ನಡೆಯುತ್ತೇವೆ ಎಂದು ಹೇಳಿದರು.
ಶಾಸಕರನ್ನು ಅಧಿಕಾರ ಪಡೆಯಲು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಕರೆತಂದರು. ಆದರೆ, ಚುನಾವಣೆ ಘೋಷಣೆಯಾದಾಗ ಅವರು ಕಾಂಗ್ರೆಸ್ ಸೇರಲು ಬಂದಿದ್ದರು ಎಂದು ಅವರು ಹೇಳಿದರು.
ಆಪರೇಷನ್ ಕಮಲದಿಂದ ಬಂದ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಸೋನಿಯಾ ಗಾಂಧಿ ಸೂಚಿಸಿದ್ದರು. ಆದ್ದರಿಂದ ವಲಸಿಗ ಶಾಸಕರನ್ನು ಕಾಂಗ್ರೆಸ್ ಸೇರಿಸಿಕೊಂಡಿಲ್ಲ. ಅಧಿಕಾರ ಪಡೆಯಲು ಕರೆತಂದ ಇಂತಹ ಶಾಸಕರಿಗೆ ಪಕ್ಷಾಂತರ ಮಾಡುವುದೇ ದೊಡ್ಡ ಕೆಲಸ ಎಂದು ಆರೋಪಿಸಿದರು.
ಎಲ್ಲರೂ ಪ್ರಚಾರ ಮಾಡುತ್ತಿದ್ದಾರೆ : ಹಿರಿಯ ನಾಯಕರು ಪ್ರಚಾರ ನಡೆಸುತ್ತಿಲ್ಲ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಮುಂತಾದ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಎಲ್ಲಾ ನಾಯಕರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ ಎಂದರು.
ಸಮರ್ಥ ಆಡಳಿತ ನೀಡಲು ಬದ್ಧ : ಪಕ್ಷದ ಹಿರಿಯ ನಾಯಕರ ಸಲಹೆ, ಅನುಭವದೊಂದಿಗೆ ಪ್ರಣಾಳಿಕೆ ರಚಿಸಲಾಗಿದೆ. ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಮರ್ಥ ನಾಯಕತ್ವದ ಮೂಲಕ, ಸ್ಚಚ್ಛ ಆಡಳಿತ ನೀಡಲು ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಾಯಕರ ಕೊರತೆ ಎದುರಿಸುತ್ತಿಲ್ಲ. ಪಕ್ಷದಲ್ಲಿ ಅನುಭವಿ ನಾಯಕರಿದ್ದಾರೆ. ಎಲ್ಲರ ಸಲಹೆ ಪಡೆದು ಚುನಾವಣೆ ಎದುರಿಸುತ್ತಿದ್ದೇವೆ. ಚುನಾವಣೆಯ ವಿವಿಧ ಸಮಿತಿಗಳ ಜವಾಬ್ದಾರಿಯನ್ನು ಪ್ರತಿ ನಾಯಕರಿಗೂ ನೀಡಲಾಗಿದೆ. ಯಾರನ್ನು ಕಡೆಗಣಿಸಿಲ್ಲ ಎಂದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications