ಭೂ ಹಗರಣ: ಸೋನಿಯಾ ಅಳಿಯನಿಗೆ ಕ್ಲೀನ್ ಚಿಟ್

ಈ ಪ್ರಕರಣದ ವಿಚಾರಣೆಗೆ ಹರ್ಯಾಣ ಸರ್ಕಾರ ತ್ರಿಸದಸ್ಯ ಸಮಿತಿ ನೇಮಿಸಿದ್ದರು. ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಾದ್ರಾ-ಡಿಎಲ್‌ಎಫ್ ನಡುವಿನ ಭೂ ಒಪ್ಪಂದ ರದ್ದುಗೊಳಿಸಿದ್ದರು ಎಂದು ವರದಿ ಸಲ್ಲಿಸಲಾಗಿದೆ. ಈ ಮೂಲಕ ಪರೋಕ್ಷವಾಗಿ ವಾದ್ರಾರನ್ನು ಬಚಾವ್ ಮಾಡಲಾಗಿದೆ. ಖೇಮ್ಕಾ ಇಲ್ಲಸಲ್ಲದ ಆರೋಪಗಳನ್ನು ರಾಬರ್ಟ್ ವದ್ರಾ ಅವರ ಮೇಲೆ ಹೊರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
43 ವರ್ಷದ ಉದ್ಯಮಿ ರಾಬರ್ಟ್ ವಾದ್ರಾ ಅವರ ಒಡೆತನದ ಸಂಸ್ಥೆಗೆ ಡಿಎಲ್ ಎಫ್ ಸಂಸ್ಥೆ ನೀಡಿರುವ ಸಾಲದ ಬಗ್ಗೆ ಸ್ಪಷ್ಟನೆ ಹೊರಬಿದ್ದಿತ್ತು. ವ್ಯಾವಹಾರಿಕ ಒಪ್ಪಂದದಂತೆ 65 ಕೋಟಿ ರು ಮುಂಗಡವಾಗಿ ನೀಡಲಾಗಿದೆ. 15 ಕೋಟಿ ರು ಹಿಂತಿರುಗಿಸಲಾಗಿದ್ದು 50 ಕೋಟಿ ರು ಭೂಮಿ ಖರೀದಿಗೆ ಬಳಸಲಾಗಿದೆ ಎಂದು ಡಿಎಲ್ ಎಫ್ ಸಂಸ್ಥೆ ಲೆಕ್ಕಾಚಾರ ಹೇಳಿತ್ತು.
ದೆಹಲಿ, ಹರ್ಯಾಣ ಹಾಗೂ ರಾಜಸ್ಥಾನ ಸರ್ಕಾರದಿಂದ ಯಾವುದೇ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿಲ್ಲ. ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಶಾಂತ್ ಭೂಷಣ್ ಅವರ ಆರೋಪಗಳಲ್ಲಿ ಹುರುಳಿಲ್ಲ ಎಂದು ಡಿಎಲ್ ಎಫ್ ಸಂಸ್ಥೆ ಪ್ರತಿಕ್ರಿಯಿಸಿತ್ತು.
ಇದಕ್ಕೂ ಮುನ್ನ ಕೇಜ್ರಿವಾಲ್ ಮಾಡಿರುವ 300 ಕೋಟಿ ರೂ ಅಕ್ರಮ ಸಂಪಾದನೆ, ಡಿಎಲ್ ಎಫ್ ಡೀಲ್ ಆರೋಪಗಳಲ್ಲಿ ಹುರುಳಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ವಾದ್ರಾ ಒಬ್ಬ ವಾಣಿಜ್ಯೋದ್ಯಮಿಯಾಗಿದ್ದು ಯಾವುದೇ ಅಕ್ರಮ ವ್ಯವಹಾರವಾಗಲಿ, ಅಧಿಕಾರ ದುರುಪಯೋಗವಾಗಲೀ ಮಾಡಿಲ್ಲ ಎಂದು ಸೋನಿಯಾ ಪ್ರತಿಕ್ರಿಯಿಸಿದ್ದರು.(ಪಿಟಿಐ)












Click it and Unblock the Notifications