ಇಂದು ಕೆಜೆಪಿ ಪಟ್ಟಿ: ಕವಿರತ್ನ ಪ್ರಸಾದ್ ಡಿಬಿ ಪುರ ಅಭ್ಯರ್ಥಿ
ದೊಡ್ಡಬಳ್ಳಾಪುರ, ಏ.13: ಯೋಜಿತ ರೀತಿಯಲ್ಲಿ ಕಾಲಕಾಲಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾ ಚುನಾವಣೆಯಲ್ಲಿ ದಾಪುಗಾಲು ಹಾಕುತ್ತಿರುವ ಕರ್ನಾಟಕ ಜನತಾ ಪಕ್ಷದ ವತಿಯಿಂದ ಇಂದು 50 ಮಂದಿಯ ನಾಲ್ಕನೆಯ ಪಟ್ಟಿ ಬಿಡುಗಡೆಯಾಗಲಿದೆ.
ಇತರೆ ಪ್ರಮುಖ ಪಕ್ಷಗಳು ಶಾಸ್ತ್ರಕ್ಕೆಂದು, ಸುರಕ್ಷಿತವಾಗಿರುವ ಮೊದಲ ಪಟ್ಟಿ ಬಿಡುಗಡೆ ಮಾಡಿ, ಬಂಡಾಯದ ಬೇಗುದಿಯಲ್ಲಿ ನರಳುತ್ತಿರುವಾಗ, ಪಕ್ಷದಲ್ಲಿ ಏನಾಗುತ್ತಿದೆ, ಯಾರನ್ನೆಲ್ಲ ಕಣಕ್ಕೆ ಇಳಿಸಲಾಗಿದೆ ಎಂಬುದು ಸ್ವತಃ ತಮಗೂ ಅರ್ಥವಾಗದೆ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಾಧ್ಯಕ್ಷ ತೊಳಲಾಡುತ್ತಿರುವಾಗ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪಟ್ಟಿ ಮೇಲೆ ಪಟ್ಟಿ ಬಿಡುಗಡೆ ಮಾಡುತ್ತಿದ್ದಾರೆ.
ಇಂದು ಬಿಡುಗಡೆಯಾಗಲಿರುವ ಪಟ್ಟಿಯ ವಿಶೇಷವೆಂದರೆ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಕವಿರತ್ನ ಬಿರುದಾಂಕಿತ ಖ್ಯಾತ ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರು ತಮ್ಮ ಹುಟ್ಟೂರಿನಿಂದ ಕಣಕ್ಕೆ ಇಳಿಯುತ್ತಿರುವುದು.

ಕ್ಷೇತ್ರದಲ್ಲಿ ಹಳೆಯ ಹುಲಿಗಳಾದ ಮಾಜಿ ಮಂತ್ರಿ ಚೆನ್ನಿಗಪ್ಪ ಮತ್ತು ಹಾಲಿ ಶಾಸಕ ಜಾಲಪ್ಪ ನರಸಿಂಹಸ್ವಾಮಿ ಅವರುಗಳು ಈಗಾಗಲೇ ಕಣದಲ್ಲಿ ತಾಲೀಮು ನಡೆಸುತ್ತಿದ್ದರೂ ಪ್ರಜಾಪ್ರಭುತ್ವದಲ್ಲಿ ಒಂದಷ್ಟು ಕನಸುಗಳನ್ನು ಹೊತ್ತು 37 ವರ್ಷದ ಯುವಕ ನಾಗೇಂದ್ರ ಪ್ರಸಾದ್, ಯಡಿಯೂರಪ್ಪ ಅವರಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ಮ್ಯಾಂಚೆಸ್ಟರ್ ಎಂದೇ ಖ್ಯಾತಿ ಗಳಿಸಿರುವ ನೇಕಾರಿಕೆಯ ದೊಡ್ಡಬಳ್ಳಾಪುರದಲ್ಲಿ ಹಳೆಯ ಹುಲಿಗಳು ಸಾಧಿಸಿರುವುದು ಅಷ್ಟರಲ್ಲೇ ಇದೆ. ಮೂಲಸಮಸ್ಯೆಗಳು ಹಾಗೇ ಇವೆ. ಆದರೆ ಆ ಸಮಸ್ಯೆಗಳು ಸಮತೋಲಗೊಂಡಿವೆ. ಅಂದರೆ ಬಾವಿ ಜಾಗದಲ್ಲಿ ನಲ್ಲಿ ಬಂದಿದೆ.
ಆದರೆ ಬಾವಿಯಲ್ಲಿ ಅಂದೂ ನೀರು ಇರಲಿಲ್ಲ. ನಲ್ಲಿಯಿಂದ ಇಂದೂ ನೀರು ಬರುತ್ತಿಲ್ಲ. ಹೀಗೆ ಸಮಸ್ಯೆಗಳ ಸಮತೋಲ ಕಾಪಾಡಿರುವುದೇ ಹಿಂದಿನ ಜನನಾಯಕರ ಹೆಗ್ಗಳಿಕೆ' ಎಂದು ಕವಿ ಭಾಷೆಯಲ್ಲಿ ದೊಡ್ಡಬಳ್ಳಾಪುರವನ್ನು ವಿಶ್ಲೇಷಿಸುತ್ತಾರೆ ಸ್ಥಳೀಯ ನಿವಾಸಿಯೂ ಆದ ನಾಗೇಂದ್ರ ಪ್ರಸಾದ್.
ಇನ್ನೂ 40ರ ಗಡಿ ದಾಟದಿದ್ದರೂ ಈಗಾಗಲೇ 1,000 ಕ್ಕೂ ಹೆಚ್ಚು ಗೀತೆಗಳನ್ನು ಬರೆದು ನಾಲ್ಕಾರು ಸಿನಿಮಾಗಳಿಗೆ ಡೈರೆಕ್ಷನ್ ಸಹ ಮಾಡಿರುವ ನಾಗೇಂದ್ರ ಪ್ರಸಾದ್ ಎಂಬ ಅಪ್ಪಟ ಪ್ರತಿಭೆಯನ್ನು ಕಂಡರೆ
ಸ್ಯಾಂಡಲ್ ವುಡ್ ದಿಗ್ಗಜರಾದ ಸುದೀಪ್, ದರ್ಶನ್, ರಾಜ್ ಸೋದರರಿಗೆ ವಿಶೇಷ ಪ್ರೀತಿ. ದೊಡ್ಡಬಳ್ಳಾಪುರದ ಯುವಶಕ್ತಿಯನ್ನು ನೆಚ್ಚಿಕೊಂಡಿರುವ ಪ್ರಸಾದ್,
ಮತದಾರನನ್ನು ದಿಕ್ಕುತಪ್ಪಿಸಿ ದುಡ್ಡು ಸುರಿದು ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಮತದಾರನ ಮನಸ್ಸು ಗೆಲ್ಲುವುದಕ್ಕೆ ಹಾತೆರೆಯುತ್ತಿದ್ದಾರೆ.
ಹಾಗಾಗಿಯೇ ಈ ಸಿನಿ ದಿಗ್ಗಜರು ಗೆಳೆಯ ನಾಗೇಂದ್ರನಿಗಾಗಿ ಪಕ್ಷಭೇದ ಮರೆತು ಚುನಾವಣೆ ಪ್ರಚಾರಕ್ಕೆ ಬರಲು ಕಾಲ್ ಷೀಟ್ ಕೊಟ್ಟಿದ್ದಾರೆ. ಇಂದು ಯಡಿಯೂರಪ್ಪ ಅವರು ಅಧಿಕೃತವಾಗಿ ಪ್ರಸಾದ್ ಗೆ ಟಿಕೆಟ್ ಘೋಷಿಸುತ್ತಿದ್ದಂತೆ ದೊಡ್ಡಬಳ್ಳಾಪುರದಲ್ಲಿ ಚುನಾವಣೆ ಕಾವು ಏರಲಿದೆ. All the best Nagendra Prasad!












Click it and Unblock the Notifications