ಒಂಟಿಯಾಗಿ ಉಳಿದಿದ್ದ ಪೂಜಾರಿ ನಿಗೂಢ ಸಾವು

ವಿನಾಯಕನಗರ 1 ನೇ ಮುಖ್ಯರಸ್ತೆಯ ನಿವಾಸಿಯಾಗಿದ್ದ 41 ವರ್ಷದ ಮಂಜುನಾಥ್ ಅವರು ಜಲಕಂಠೇಶ್ವರ ಪುರದಲ್ಲಿ ಮೂರು ಅಂತಸ್ತಿನ ಮನೆ ಹೊಂದಿದ್ದರು. ಎರಡನೇ ಅಂತಸ್ತಿನಲ್ಲಿ ನೆಲೆಸಿದ್ದರು. ಎರಡು ಭಾಗವನ್ನು ಅಂಗಡಿಗೆ ನೆಲ ಅಂತಸ್ತಿನಲ್ಲಿ ಎರಡು ಮನೆ ಬಾಡಿಗೆಗೆ ಬಿಟ್ಟಿದ್ದರು.
ಇವರ ಪತ್ನಿ 2006ರಲ್ಲಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದರು. ಈ ಸಂಬಂಧ ವರದಕ್ಷಿಣೆ ಕಿರುಕುಳದ ಆರೋಪ ಹೊರೆಸಿ ಮಂಜುನಾಥ್ ಅವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ, ನಂತರ ಜಾಮೀನಿನ ಮೇಲೆ ಹೊರ ಬಿದ್ದ ಮೇಲೆ ಸಂಬಂಧಿಕರಿಂದ ದೂರವಾಗಿ ಒಂಟಿಯಾಗಿ ನೆಲೆಸಿದ್ದರು,
ಒಂಟಿಯಾಗಿ ನಗರದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡು ವಾಸವಾಗಿದ್ದ ಇವರಿಗೆ ಸಹೋದರ ಬಿಟ್ಟರೆ ಮತ್ಯಾರು ಸಂಪರ್ಕದಲ್ಲಿರಲಿಲ್ಲ ಇವರು ಸುಮಾರು ಮೂರು ದಿನಗಳ ಹಿಂದೆ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬುಧವಾರ ಇವರ ಮನೆ ಶೌಚಾಲಯದ ಸಮೀಪ ಹೆಣ ತೀವ್ರವಾಗಿ ಕೊಳೆತು ಹೋದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅನುಮಾನ ವ್ಯಕ್ತವಾಗಿಲ್ಲ.
ಕಳೆದ ಎರಡು ದಿನಗಳಿಂದ ಮಂಜುನಾಥ್ ಫೋನ್ ಸಂಪರ್ಕ ಕಡಿತ ಕಂಡಿದ್ದು, ಯಾರೊಂದಿಗೂ ಮಾತನಾಡಿರಲಿಲ್ಲ. ಪತ್ನಿ ಸಾವಿನ ನಂತರ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಈ ಬಗ್ಗೆ ಬೇಸರಗೊಂಡು ಆಪ್ತರಲ್ಲಿ ಇತ್ತೀಚೆಗೆ ಮಾತನಾಡಿದ್ದರು ಎಂದು ತಿಳಿದು ಬಂದಿದೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾವಿನ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications