ಶಿಕಾರಿಪುರ : ಯಡಿಯೂರಪ್ಪ ವಿರುದ್ಧ ಬಳಿಗಾರ್ ಸ್ಪರ್ಧೆ

ಶಿಕಾರಿಪುರ ತಾಲೂಕಿನ ಮಟ್ಟಿಕೋಟೆ ಗ್ರಾಮದ ನಿವಾಸಿಯಾದ ಹೊಳೆಬಸಪ್ಪ ಬಳಿಗಾರ್ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ವಿರುದ್ಧ ಸೆಣಸಾಡಲು ತಯಾರಾಗಿರುವ ಹುರಿಯಾಳು. ಮೂಲತಃ ಕೆಎಎಸ್ ಅಧಿಕಾರಿಯಾದ ಬಳಿಗಾರ್ ಸ್ವಯಂ ನಿವೃತ್ತಿ ಪಡೆದು ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಕೃಷಿಕ ಕುಟುಂಬದ ಹಿನ್ನೆಲೆಯ ಬಳಿಗಾರ್ 1994ರಲ್ಲಿ ಬಂಗಾರಪ್ಪ ಅವರ ಜೊತೆ ಗುರುತಿಸಿಕೊಂಡು ರಾಜಕೀಯದ ನಂಟು ಬೆಳೆಸಿಕೊಂಡವರು. ಉದ್ಯೋಗ ಮಾಡುವಾಗಲೇ ಹುಟ್ಟು ಹಾಕಿದ ಜಾನಜಾಗೃತಿ ವೇದಿಕೆ ಮುಖಾಂತರ ಶಿಕಾರಿಪುರ ತಾಲೂಕಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಬಂಗಾರಪ್ಪ ಅವರ ಪರವಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ತಾಲೂಕಿನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ ಬಳಿಗಾರ್, ಮೊದಲ ಬಾರಿ ವಿಧಾನಸಭೆ ಚುನಾವಣೆ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ವಿರುದ್ದ ಸ್ಪರ್ಧಿಸಲಿದ್ದಾರೆ.
ಇವರಿಗೆ ಟಿಕೆಟ್ ನೀಡುವ ಕುರಿತು ಜೆಡಿಎಸ್ ನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಪ್ರಕಾರ ಬಳಿಗಾರ್ ಅವರಿಗೆ ಟಿಕೆಟ್ ದೊರೆಯುವುದು ಖಚಿತವಾಗಿದೆ. ಇದರಿಂದ ತಾಲೂಕಿನ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳಾರು ಎಂದು ಅಂತಿಮಗೊಂಡಿಲ್ಲ.
ಬಿಜೆಪಿಯಲ್ಲಿದ್ದಾಗ ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿದ್ದ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ್ದಾರೆ. ಈಗಲೂ ಶಿಕಾರಿಪುರ ಜನರು ಅವರ ಬಗೆಗೆ ಅಪಾರಗೌರವ ಹೊಂದಿದ್ದಾರೆ. ಆದರೆ, ಚುನಾವಣೆಯಲ್ಲಿ ಮತದಾರರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದು ನಿಗೂಢವಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸುವುದೇ ದೊಡ್ಡ ಸವಾಲು. ಕಳೆದ ಬಾರಿ ಕಾಂಗ್ರೆಸ್ ನಿಂದ ಯಡಿಯೂರಪ್ಪ ಎದುರಾಳಿಯಾಗಿದ್ದ ಶೇಖರಪ್ಪ ಕೆಜೆಪಿ ಸೇರಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಪದ್ಮನಾಭ ಭಟ್ ಹೆಸರು ಕೇಳಿಬರುತ್ತಿದ್ದರೂ ಅವರು ಇನ್ನೂ ಸ್ಪರ್ಧಿಸುವ ಧೈರ್ಯ ತೋರಿಲ್ಲ. ಇವುಗಳ ನಡುವೆಯೇ ಬಳಿಗಾರ್ ಯಡಿಯೂರಪ್ಪ ವಿರುದ್ದ ತೊಡೆ ತಟ್ಟಲು ಸಜ್ಜಾಗಿ ನಿಂತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications