ಯಡಿಯೂರಪ್ಪ ಬಿಜೆಪಿಗೆ ಮರಳೋಲ್ಲ : ಡಿವಿಎಸ್

ಮಂಗಳೂರಿನಲ್ಲಿ ಮಾತನಾಡಿದ ಸದಾನಂದ ಗೌಡರು, ವಸತಿ ಸಚಿವ ವಿ.ಸೋಮಣ್ಣ ಯಡಿಯೂರಪ್ಪ ಅವರ ಆಪ್ತರು. ಅವರು ಯಡಿಯೂರಪ್ಪ ಅವರಿಗೆ ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದರು.
ಶನಿವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿಯೂ ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳಿಂದ ಆತಂಕಗೊಂಡಿರುವ ಬಿಜೆಪಿ ಯಡಿಯೂರಪ್ಪ ಅವರನ್ನು ಪುನಃ ಕರೆತರುತ್ತದೆ ಎಂಬುದು ಸತ್ಯಕ್ಕೆ ದೂರವಾದ್ದು ಎಂದು ಹೇಳಿದರು.
ನಾನು ರಾಜ್ಯಾಧ್ಯಕ್ಷ ನಲ್ಲ : ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಪಡೆಯಲು ನಾನು ಯಾವುದೇ ಲಾಬಿ ನಡೆಸಿಲ್ಲ. ನಾನು ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸದಾನಂದ ಗೌಡರು ಸ್ಪಷ್ಟ ಪಡಿಸಿದರು. ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಬಿಜೆಪಿ ವರಿಷ್ಠರಿಗೆ ಬಿಟ್ಟ ನಿರ್ಧಾರ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ವಾರಣಾಸಿ ಪ್ರವಾಸದಲ್ಲಿದ್ದು, ದೆಹಲಿಗೆ ಮರಳಿದ ಬಳಿಕ ರಾಜ್ಯಾಧ್ಯಕ್ಷರ ಹುದ್ದೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಮತದಾರರ ಬಳಿಗೆ ಬಿಜೆಪಿ : ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಪರವಾದ ಆಡಳಿತದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯಾದ್ಯಂತ ಬಿಜೆಪಿ ರಥಯಾತ್ರೆ ಹಮ್ಮಿಕೊಂಡಿದೆ. ಮಾ.23ರಿಂದ ಪ್ರಾರಂಭವಾಗುವ ಈ ರಥಯಾತ್ರೆ ಮಾ.30ರಂದು ಕೊನೆಗೊಳ್ಳಲಿದೆ.
ರಥಯಾತ್ರೆಯ ಅಂತಿಮ ದಿನಾಂಕದಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗುವುದು. ಯುಪಿಎ ಸರ್ಕಾರದ ವೈಫಲ್ಯ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಮತದಾರರಿಗೆ ರಥಯಾತ್ರೆ ಮೂಲಕ ತಲುಪಿಸಲಾಗುವುದು ಎಂದರು.
ವಿಧಾನಸಭೆ ಚುಣಾವಣೆ ತಯಾರಿ ಆರಂಭಿಸಿರುವ ಬಿಜೆಪಿ ಮುಂದಿನ ಚುಣಾವಣೆಯಲ್ಲಿಯೂ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಗೆಲುವಿಗಾಗಿ ಬಿಜೆಪಿ ಯಾವ ಕಾರ್ಯತಂತ್ರ ಅನುಸರಿಸುತ್ತದೆ ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications