ಯಡಿಯೂರಪ್ಪಗೆ ಡಿವಿಎಸ್ ಕೊಟ್ರು ನೋಡಿ ಟಾಂಗ್

ಪಕ್ಷದಿಂದ ಯಾರೂ ಹೊರ ಹೋಗುತ್ತಿಲ್ಲ ಎಂದು ವಿ ಸೋಮಣ್ಣ, ಬಚ್ಚೇಗೌಡ, ಉಮೇಶ್‌ಕತ್ತಿ, ರೇಣುಕಾಚಾರ್ಯ ಮತ್ತಿತರರು ಸ್ಪಷ್ಟಪಡಿಸಿದ್ದಾರೆ. ಎಲ್ಲರೂ ಬಿಜೆಪಿಯಲ್ಲೇ ಇರುವುದಾಗಿ ಹೇಳಿದ್ದಾರೆ. ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಗೊಂದಲ ಯಾವ ಕಡೆಯಿಂದ ಹುಟ್ಟುಕೊಂಡಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ ಎಂದು ಸದಾನಂದ ಗೌಡರು ಜಾಡಿಸಿದರು.
ಟಿಕೆಟ್ ಹಂಚಿಕೆ ಕುರಿತಂತೆ ಸಚಿವ ರೇಣುಕಾಚಾರ್ಯ ಅವರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡರು ಅವರಲ್ಲಿ ಕೆಲ ದೂರುಗಳು, ಸಣ್ಣ ಪುಟ್ಟ ಅಸಮಾಧಾನಗಳಿರಬಹುದು. ಆದರೆ, ಅದು ಮಾಧ್ಯಮಗಳ ಮುಂದೆ ಬರಬಾರದಾಗಿತ್ತು. ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಯಡಿಯೂರಪ್ಪ ಅವರಿಂದಲೇ ಬಿಜೆಪಿಗೆ ಹಿನ್ನಡೆಯಾಯಿತು ಎಂದು ಹೇಳಬೇಡಿ. ಹಾಗೆ ಭಾವಿಸುವುದೂ ಬೇಡ. ಕೆಲವು ಕಡೆಗಳಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಸಣ್ಣಪುಟ್ಟ ಟಿಕೆಟ್ ಹಂಚಿಕೆ ವ್ಯತ್ಯಾಸದಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋತಿದ್ದಾರೆ ಅಷ್ಟೆ.
ಯಡಿಯೂರಪ್ಪ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ ಮುಂದೆ ಸೋಲಿನ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ಯಶಸ್ಸು ಶಾಶ್ವತವಲ್ಲ ಕಾರ್ಯಕರ್ತರ ಪರಿಶ್ರಮ ಶಾಶ್ವತ ಕೊನೆವರೆಗೂ ನಿಮ್ಮೊಟ್ಟಿಗೆ ಯಾರು ಇರುತ್ತಾರೆ ನೋಡೋಣ ಎಂದು ಸದಾನಂದ ಗೌಡ ಹೇಳಿದ್ದಾರೆ.
ಸಿಟಿ ರವಿ ಅವರು ಹೇಳಿದಂತೆ ಮತ ವಿಭಜನೆಯಾಗಿ ನಮಗೆ ಸೋಲಾಗಿದೆ. ಆದರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಈ ರೀತಿ ಆಗದಂತೆ ಎಲ್ಲ ಕಾರ್ಯತಂತ್ರಗಳನ್ನು ಮಾಡುತ್ತೇವೆ. ಚುನಾವಣೆಯಲ್ಲಿ ಗೆದ್ದು ಬಹುಮತದಿಂದಲೇ ಮತ್ತೊಮ್ಮೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸದಾನಂದಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಅಧ್ಯಕ್ಷರ ನೇಮಕ: ಇನ್ನೆರಡು ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ಹೊಸ ರಾಜ್ಯಾಧ್ಯಕ್ಷರು ನೇಮಕಗೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಈಗಾಗಲೇ ನಮ್ಮ ರಾಷ್ಟ್ರೀಯ ಮುಖಂಡರಾದ ಅರುಣ್ ಜೇಟ್ಲಿ ಅವರು ಇಲ್ಲಿಗೆ ಬಂದು ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ ಮತ್ತು ಈಗಾಗಲೇ ನಮ್ಮ ರಾಷ್ಟ್ರೀಯ ಆಧ್ಯಕ್ಷ ರಾಜನಾಥ್‌ಸಿಂಗ್ ಅವರಿಗೂ ವರದಿ ನೀಡಿದ್ದಾರೆ ಎಂದು ಸದಾನಂದಗೌಡ ಹೇಳಿದರು.
ಮಲ್ಲೇಶ್ವರದಲ್ಲಿರುವ ಬಿಜೆಪಿಯ ಕಚೇರಿಯಲ್ಲಿ ಇಂದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಪಕ್ಷದ ಮುಖಂಡರ ಸಭೆ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ ಸದಾನಂದಗೌಡರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಂದು ಸಿಎಂ ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಮುಂದಿನ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಮಹತ್ವ ಚರ್ಚೆ ನಡೆಸಲಾಯಿತು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications