ಕಾಂಗ್ರೆಸ್ ಗೆ ಬರಬೇಡಿ ವಲಸಿಗರಿಗೆ ಮೋಯ್ಲಿ ಟಾಂಗ್

ನವದೆಹಲಿಯಲ್ಲಿ ಮಂಗಳವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ, ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿಯ ಭಷ್ಟ ಆಡಳಿತ ಫಲವಾಗಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಿಂತ ಉತ್ತಮ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬರಬೇಕು. ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ನೋಡಿಕೊಂಡು ವಿವಿಧ ಪಕ್ಷಗಳಿಂದ ಬರುವ ವಲಸಿಗರಿಗೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿರುವ ಅನೇಕ ಸಚಿವರು ಮತ್ತು ಶಾಸಕರು ಭ್ರಷ್ಟಾಚಾರ ಮಾಡಿದ್ದಾರೆ. ಅಂತಹವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಲಿದೆ. ವಲಸಿಗರಾಗಿ ಪಕ್ಷಕ್ಕೆ ಬರುವವರಿಗೆ ಕಾಂಗ್ರೆಸ್ ಆದ್ಯತೆ ನೀಡುವುದಿಲ್ಲ ಎಂದು ಹೇಳಿದರು.
ಈಗಾಗಲೇ ಅನೇಕರು ಕಾಂಗ್ರೆಸ್ ಸೇರುವ ಉತ್ಸಾಹದಲ್ಲಿದ್ದಾರೆ. ಕೆಲವು ಶಾಸಕರು ಕಾಂಗ್ರೆಸ್ ಸೇರಿದ್ದಾರೆ. ಅನ್ಯ ಪಕ್ಷದಿಂದ ವಲಸೆ ಬಂದ ಅಭ್ಯರ್ಥಿಗಳಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ. ನಮ್ಮ ಪಕ್ಷದಲ್ಲೇ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸೂಕ್ತ ಅಭ್ಯರ್ಥಿಗಳಿದ್ದಾರೆ ಎಂದರು.
ನಮ್ಮಲ್ಲಿಯೇ ಸೂಕ್ತ ಅಭ್ಯರ್ಥಿಗಳಿರುವಾಗ, ಅನ್ಯ ಪಕ್ಷದಿಂದ ಬಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ವಲಸಿಗರಿಗೆ ಕಾಂಗ್ರೆಸ್ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಇದರಿಂದಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಿ.ಪಿ.ಯೋಗೀಶ್ವರ್ ಅವರಿಗೆ ಟಿಕೆಟ್ ದೊರೆಯುವುದು ಖಾತ್ರಿ ಇಲ್ಲದಂತಾಗಿದೆ.
ವೀರಪ್ಪ ಮೋಯ್ಲಿ ಅವರ ಈ ಹೇಳಿಕೆಯಿಂದ ಬಿಜೆಪಿ ಪಾಳಯದಿಂದ ಕಾಂಗ್ರೆಸ್ ಸೇರುವ ಉತ್ಸಾಹದಲ್ಲಿದ್ದ ಮಾಜಿ ಸಚಿವ ರಾಜೂಗೌಡ, ಸಚಿವರಾದ ಆನಂದ್ ಅಸ್ನೋಟಿಕರ್, ವಿ.ಸೋಮಣ್ಣ ಮುಂತಾದವರಿಗೆ ತೀವ್ರ ನಿರಾಸೆ ಉಂಟಾಗಿದೆ.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಮಾಡಲು ಮುಂದಾಗಿದ್ದ ಶಾಸಕರಿಗೆ ಮುಂದಿನ ಭವಿಷ್ಯವೇನು ಎಂಬ ಚಿಂತೆ ಕಾಡುತ್ತಿದ್ದರೆ. ಆಡಳಿತಾರೂಢ ಬಿಜೆಪಿ ಮಾತ್ರ ಶಾಸಕರು ಪಕ್ಷಾಂತರ ಮಾಡುವುದಿಲ್ಲ ಎಂದು ಕೊಂಚ ಸಮಾಧಾನಪಟ್ಟು ಕೊಂಡಿರಬಹುದು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications