ಮಿನಿ ಸಮರ ಫಲಿತಾಂಶ: ಕೆಜೆಪಿ ರಿಪೋರ್ಟ್ ಕಾರ್ಡ್
ಬೆಂಗಳೂರು, ಮಾ.11: ಬಿಜೆಪಿಯಿಂದ ಬಂಡಾಯವೆದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಮಹತ್ವದ್ದಾಗಿದೆ. ಪ್ರಪ್ರಥಮ ಬಾರಿಗೆ ಬಿಜೆಪಿ ಬಾವುಟ ಬಿಟ್ಟು ಸ್ವಂತ ಬಲದಿಂದ ಯಡಿಯೂರಪ್ಪ ಎಷ್ಟು ಸೀಟು ಗೆಲ್ಲಿಸಿಕೊಡಬಲ್ಲರು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಈಗ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಯಡಿಯೂರಪ್ಪ ಅವರಿಗೆ ಪ್ರಥಮ ಚುಂಬನಂ ದಂತಭಗ್ನಂ ಅನುಭವವಂತೂ ಆಗಿಲ್ಲ ಎಂದು ಅಂಕಿ ಅಂಶಗಳು ಸಾರುತ್ತಿವೆ.
ಬಿ.ಎಸ್ ಯಡಿಯೂರಪ್ಪ ಮಾಡಿದ್ದೆಲ್ಲ ಕಾಂಗ್ರೆಸ್ ಕಡೆಗೆ ಮತಗಳು ವಾಲುವಂತೆ ಮಾಡಿದೆ ಎಂದು ಷರಾ ಬರೆಯಲು ನಮಗೂ ಕಷ್ಟವಾಗುತ್ತದೆ. ಪೂರಕ ಮಾಹಿತಿ ಸದ್ಯಕ್ಕಂತೂ ಸಿಕ್ಕಿಲ್ಲ, ಆದರೆ, ಹತ್ತು ಹಲವು ಕಡೆ ಬಿಜೆಪಿ ಭದ್ರಕೋಟೆಗಳಲ್ಲಿ ಟ್ರೆಂಡ್ ಬದಲಾವಣೆ ಮಾಡುವಲ್ಲಿ ಕೆಜೆಪಿ ಗೆದ್ದಿದೆ.
ಯಡಿಯೂರಪ್ಪ ಅವರದ್ದು ಪ್ರಾದೇಶಿಕ ಪಕ್ಷವಾದ್ದರಿಂದ ಮುಂದೆ ಕಿಂಗ್ ಅಲ್ಲದಿದ್ದರೂ ಕಿಂಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಜೆಡಿಎಸ್ ಭರ್ಜರಿ ಹೈ ಜಂಪ್ ಹಾರಿ ಕಿಂಗ್ ಪಟ್ಟದ ಮೇಲೆ ಒಂದು ಟವೆಲ್ ಹಾಸಿಬಿಟ್ಟಿದೆ. ಬಿಜೆಪಿ ಕಮಲ ಉದುರುತ್ತಿದ್ದು, ಕಾಂಗ್ರೆಸ್ ಕೈ ಎಲ್ಲೆಡೆ ಬೀಸುತ್ತಿದೆ.
ಕೆಜೆಪಿ ರಿಪೋರ್ಟ್ ಕಾರ್ಡ್ : 7 ಮಹಾನಗರಪಾಲಿಕೆಯಲ್ಲಿ ಕರ್ನಾಟಕ ಜನತಾ ಪಕ್ಷ ಹೆಚ್ಚು ಸದ್ದು ಮಾಡಲು ಆಗಿಲ್ಲ.
* ಮಹಾ ನಗರ ಪಾಲಿಕೆ 381 ಸೀಟುಗಳಲ್ಲಿ ಕೆಜೆಪಿ 9 ಸೀಟು ಪಡೆದಿದೆ.
* 1393 ನಗರ ಸಭೆ ಸೀಟುಗಳ ಪೈಕಿ 83 ಸೀಟು ಗಳಿಸಿದೆ.
* 2199 ಪುರ ಸಭೆ ಸೀಟುಗಳ ಪೈಕಿ 108 ಸೀಟು ಗೆದ್ದಿದೆ.
* 1003 ಪಟ್ಟಣ ಪಂಚಾಯಿತಿ ಸೀಟುಗಳಲ್ಲಿ 74 ಸ್ಥಾನ ಗಳಿಸಿದೆ.
ಕೆಜೆಪಿ ಸ್ಕೋರ್ ಕಾರ್ಡ್ ವಿವರಣೆ ಮುಂದುವರೆಯಲಿದೆ..ಸ್ಲೈಡ್ ಗಳಲ್ಲಿ ನೋಡಿ....

ಬಿಎಸ್ ಆರ್ ಪಾರ್ಟಿಗಿಂತ ಕೆಜೆಪಿ ಬೆಟರ್
ಬಿಜೆಪಿಯ ಮತ್ತೊಬ್ಬ ಬಂಡಾಯ ಹಕ್ಕಿ ಬಿಎಸ್ ಶ್ರೀರಾಮುಲು ಅವರಿಗೆ ಹೋಲಿಸಿದರೆ ಬಿಎಸ್ ಯಡಿಯೂರಪ್ಪ ಅವರ ಸಾಧನೆ ಗಮನಾರ್ಹವಾಗಿದೆ. ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಒಟ್ಟಾರೆ 86 ಸೀಟುಗಳನ್ನು ಮಾತ್ರ ಪಡೆದಿದೆ. ಅದರಲ್ಲೂ ಗಾಲಿ ರೆಡ್ಡಿ ಮನೆತನದ ಪ್ರಭಾವ ಇರುವ ಬಳ್ಳಾರಿ ನಗರ ಪಾಲಿಕೆ ಪುರ ಸಭೆ, ನಗರ ಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲೂ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗದೆ ಅತ್ಯಂತ ಹೀನಾಯ ಸೋಲು ಕಂಡಿದ್ದಾರೆ.

ನಿರೀಕ್ಷೆಗೆ ತಕ್ಕಂತೆ ಫಲ ಸಿಕ್ಕಿತೆ?
ಶಿವಮೊಗ್ಗ, ಹಾವೇರಿ, ದಾವಣಗೆರೆ, ಯಾದಗಿರಿ, ತುಮಕೂರಿನಲ್ಲಿ ಕೆಜೆಪಿ ಪ್ರಭಾವ ಬೀರಬಹುದು ಎನ್ನಲಾಗಿತ್ತು. ಆದರೆ, ಸಾಧನೆ ಮಾಡಿದ್ದು ಅಷ್ಟಕಷ್ಟೇ. ಅಚ್ಚರಿ ಎಂಬಂತೆ ಗುಲ್ಬರ್ಗಾದಲ್ಲಿ ಭರ್ಜರಿ ಪ್ರದರ್ಶನ ನೀಡಿ 46 ಸೀಟು ಪಡೆದಿದೆ. ಅಲ್ಲದೆ ಬೀದರ್ ನಲ್ಲಿ 23 ಸ್ಥಾನ ಗೆದ್ದು ಬೀಗಿದೆ. ಚಿತ್ರದುರ್ಗದಲ್ಲಿ 14, ಚಾಮರಾಜನಗರದಲ್ಲಿ 19 ಹಾಗೂ ಹಾಸನದಲ್ಲಿ 10 ಸ್ಥಾನ ಗಳಿಸಿದೆ.

ತವರು ಜಿಲ್ಲೆಯ ಫಲಾಫಲ
ಶಿವಮೊಗ್ಗ ಸಿಎಂಸಿಯಲ್ಲಿ 7, ಶಿಕಾರಿಪುರ ಟಿಎಂಸಿಯಲ್ಲಿ 15 ಗಳಿಸಿ ಬಿಜೆಪಿಗೆ ಟಾಂಗ್ ಕೊಟ್ಟಿದೆ. ಆದರೆ, ತೀರ್ಥಹಳ್ಳಿ, ಭದ್ರಾವತಿ ಸಾಗರದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಶಿರಾಳಕೊಪ್ಪದಲ್ಲಿ ಕಾಂಗ್ರೆಸ್ ಜೊತೆ ಸಮಬಲ ಹೋರಾಟ ತೋರಿ 5 ಸ್ಥಾನ ಗಳಿಸಿದೆ. ಮಲೆನಾಡಿನಲ್ಲಿ ಉಡುಪಿ, ದಕ್ಷಿಣ ಕನ್ನಡಲ್ಲಿ ಕೆಜೆಪಿ ಖಾತೆ ತೆರೆದಿಲ್ಲ. ಚಿಕ್ಕಮಗಳೂರಿನಲ್ಲಿ 5 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಪಕ್ಷ ಹುಟ್ಟು ಪಡೆದ ನೆಲ
ಹಾವೇರಿಯಲ್ಲಿ ಆರಂಭವಾದ ಪಕ್ಷ ಕೆಜೆಪಿ ಜಿಲ್ಲೆಯಲ್ಲಿ ಒಟ್ಟಾರೆ 51 ಸ್ಥಾನ ಪಡೆದಿದೆ. ರಾಣೇಬೆನ್ನೂರಲ್ಲಿ ಬಿಜೆಪಿ ಸೆಡ್ಡು ಹೊಡೆದು 9, ಬ್ಯಾಡಗಿ 12, ಹಾನಗಲ್ 15, ಹೀರೆಕೆರೂರು 7 ವಶ ಪಡಿಸಿಕೊಂಡು ಸಾಧನೆ ಮೆರೆದಿದೆ. ಆದರೆ, ಸವಣೂರು, ಬಂಕಾಪುರ, ಶಿಗ್ಗಾಂವ್ ನಲ್ಲಿ ಕೆಜೆಪಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಅಚ್ಚರಿಯ ಗೆಲುವು
ಬೀದರ್ ನಲ್ಲಿ ಚಿಟಗುಪ್ಪ(TMC) ಹೊಡೆದುಕೊಂಡ ಕೆಜೆಪಿ, ನಗರ ಪಾಲಿಕೆಯಲ್ಲಿ 5 ಸ್ಥಾನ ಪಡೆದಿದೆ. ಔರಾದ್ ಪಟ್ಟಣ ಪಂಚಾಯಿತಿಯಲ್ಲಿ 7 ಸ್ಥಾನ ಪಡೆದು ಬಿಜೆಪಿಗೆ ಸಮಬಲ ಹೋರಾಟ ನೀಡಿದೆ. ಹುಮ್ನಾಬಾದಿನಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಒಟ್ಟಾರೆ 23 ಸ್ಥಾನ ಗಳಿಸಿದ್ದು ಇಲ್ಲಿನ ಸಾಧನೆ

ದೊಡ್ಡ ಸಾಧನೆ
ಗುಲ್ಬರ್ಗಾದ ಅಫ್ಜಲಪುರ ಪಟ್ಟಣ ಪಂಚಾಯಿತಿಯಲ್ಲಿ 20 ಸೀಟುಗಳಲ್ಲಿ 14 ಸೀಟು ಪಡೆದ ಕೆಜೆಪಿ, 8 ಸ್ಥಾನಗಳೊಂದಿಗೆ ಆಳಂದ ಪುರಸಭೆಯನ್ನು ತನ್ನದಾಗಿಸಿಕೊಂಡಿದೆ. ಗುಲ್ಬರ್ಗಾ ನಗರ ಪಾಲಿಕೆಯಲ್ಲಿ ಬಿಜೆಪಿ, ಕೆಜೆಪಿ ತಲಾ 7 ಸ್ಥಾನ ಪಡೆದಿವೆ. ಚಿಂಚೋಳಿಯಲ್ಲಿ ಎರಡನೇ ಸ್ಥಾನ ಪಡೆದು ಒಟ್ಟಾರೆ ಜಿಲ್ಲೆಯಲ್ಲಿ 46 ಸ್ಥಾನ ಕಬಳಿಸಿದೆ.

ನಿರೀಕ್ಷೆಗೆ ತಕ್ಕ ಫಲವಿಲ್ಲ
ಉಳಿದಂತೆ ತುಮಕೂರಿನಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಶಿರಾ, ಕುಣಿಗಲ್, ಮಧುಗಿರಿ, ಪಾವಗಡ, ಕೊರಟಗೆರೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಉಳಿದ ಕಡೆ ಖಾತೆ ತೆರೆದರೂ ಯಾವುದೇ ಪ್ರಯೋಜವಾಗಿಲ್ಲ.ಒಟ್ಟಾರೆ 20 ಸ್ಥಾನ ತೃಪ್ತಿಪಟ್ಟಿದೆ.

ಚಾಲೆಂಜ್ ಟುಸ್
ಹಾಸನದಲ್ಲಿ ಬಿಜೆಪಿ ವಿರುದ್ಧ ಚಾಲೆಂಜ್ ಮಾಡಿದ್ದ ಕೆಜೆಪಿ ಹೆಚ್ಚು ಕಿಸಿಯಲು ಆಗಿಲ್ಲ. ಆಲೂರು ಪಟ್ಟಣ ಪಂಚಾಯಿತಿ ವಶಪಡಿಸಿಕೊಂಡ ಕೆಜೆಪಿ ಹಾಸನ ಸಿಎಂಸಿಯಲ್ಲಿ ಕೇವಲ 1 ಸ್ಥಾನ ಗಳಿಸಿ ಕಳಪೆ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟಾರೆ 10 ಸ್ಥಾನ ಗಳಿಸಿದ್ದೆ ಸಾಧನೆ. ಹೊಳೆನರಸೀಪುರ, ಬೇಲೂರು, ಚನ್ನರಾಯಪಟ್ಟಣದಲ್ಲಿ ಖಾತೆ ತೆರೆದಿಲ್ಲ.

ಚಾಮರಾಜನಗರ ಬೋನಸ್
ಚಾಮರಾಜನಗರ ಕೂಡಾ ಕೆಜೆಪಿಗೆ ಬೋನಸ್ ಅಂಕ ನೀಡಿದ ಜಿಲ್ಲೆಯಾಗಿದೆ. ಚಾಮರಾಜನಗರ ಪಾಲಿಕೆಯಲ್ಲಿ 6 ಸ್ಥಾನ ಗಳಿಸಿ 4 ಸ್ಥಾನ ಗಳಿಸಿದ್ದ ಬಿಜೆಪಿಗೆ ಪೆಟ್ಟು ಕೊಟ್ಟಿದೆ. ಗುಂಡ್ಲುಪೇಟೆ ಟಿಎಂಸಿಯಲ್ಲಿ 9 ಸ್ಥಾನ ಗಳಿಸಿದೆ. ಇಲ್ಲಿ ಬಿಜೆಪಿ ಖಾತೆ ತೆಗೆಯದೆ ಸೋತಿದೆ. ಒಟ್ಟಾರೆ ಜಿಲ್ಲೆಯಲ್ಲಿ 19 ಸ್ಥಾನ ಗಳಿಸಿದ್ದು ಯಡಿಯೂರಪ್ಪ ಅವರ ಸಾಧನೆ.

ಚಿತ್ರದುರ್ಗ ಡಬಲ್ ಬೋನಸ್
ಚಿತ್ರದುರ್ಗದ ನಗರ ಪಾಲಿಕೆಯಲ್ಲಿ ಬಿಜೆಪಿ ಶೂನ್ಯ ಸಂಪಾದನೆಗೆ ಪ್ರತಿಯಾಗಿ ಕೆಜೆಪಿ 2 ಸ್ಥಾನ ಗಳಿಸಿದೆ. ಚಳ್ಳಕೆರೆಯಲ್ಲಿ 6 ಸ್ಥಾನ ಗಳಿಸಿ ಬಿಜೆಪಿಗೆ ಮತ್ತೆ ಟಾಂಗ್ ನೀಡಿದೆ. ಹೊಳೆಲ್ಕೆರೆ ಪಟ್ಟಣ ಪಂಚಾಯಿತಿಯಲ್ಲಿ 5 ಸ್ಥಾನ ಸೇರಿ ಒಟ್ಟಾರೆ 14 ಸ್ಥಾನ ಗಳಿಸಿದ್ದು ಬೋನಸ್

ಶೂನ್ಯ ಸಾಧನೆ ಎಲ್ಲೆಲ್ಲಿ?
ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಮಂಡ್ಯ, ಕೊಡಗು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕೆಜೆಪಿ ಸೊನ್ನೆ ಸುತ್ತಿದ್ದರೆ, ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಕೋಲಾರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಬೆಳಗಾವಿ, ಬಿಜಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಶೂನ್ಯ ಸುತ್ತಿದ ಸಾಧನೆ ಮಾಡಿದ್ದಾರೆ.












Click it and Unblock the Notifications