ರಾಷ್ಟ್ರೀಯ ಸುದ್ದಿಚಿತ್ರಗಳು : ಮಾರ್ಚ್ 2, 2013
ನವದೆಹಲಿ, ಮಾ. 2 : ಶನಿವಾರ, ಮಾ.2ರಂದು ದೇಶದಲ್ಲಿ ನಡೆದಿರುವ ಪ್ರಮುಖ ಘಟನೆಗಳ ಚಿತ್ರಸುದ್ದಿಗಳ ಗುಚ್ಛ ಇಲ್ಲಿದೆ. ಕರ್ನಾಟಕದ ಕೊಲ್ಲೂರಿನಲ್ಲಿ ಭಾರತದ ಕುಬೇರ ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾಬೆನ್ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ್ದು ಸುದ್ದಿಗೆ ಗ್ರಾಸವಾಗಿದೆ.
ಒಂದೆಡೆ, ದೆಹಲಿಯಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೇಂದ್ರಬಿಂದುವಾಗಿದ್ದರೆ, ಇನ್ನೊಂದೆಡೆ ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾಂಕ್ ತೆರೆಯುತ್ತಿರುವುದಕ್ಕೆ ಮಹಿಳಾ ಕಾರ್ಯಕರ್ತೆಯರು ಸೋನಿಯಾ ಗಾಂಧಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಬಿಜೆಪಿಯ ಸಭೆಯಲ್ಲಿ ಮಾತನಾಡಿದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು, ರಾಮ ರಾವಣನನ್ನು ಕೊಂದಂತೆ, ಕೃಷ್ಣ ಕಂಸನನ್ನು ಹತ್ಯೆ ಮಾಡಿದಂತೆ, ಒಬಾಮಾ ಒಸಾಮಾನನ್ನು ಕೊಂದಂತೆ ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷವನ್ನು ಸಮಾಪ್ತಿಗೊಳಿಸಲಿದೆ ಎಂದು ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾರಿಗೆ ನೀರು ಕುಡಿಸಲಿದ್ದಾರೆ ಮೋದಿ?
ನವದೆಹಲಿಯಲ್ಲಿ ಚುನಾವಣಾ ಧಗೆ ಆರಂಭವಾಗಿದೆ. ರಾಷ್ಟ್ರದ ರಾಜಧಾನಿಯಲ್ಲಿ ನಡೆದ ಬಿಜೆಪಿಯ ಮಹತ್ವದ ಸಭೆ ಮತ್ತೊಂದು ಕಾವನ್ನು ಎಬ್ಬಿಸಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿತವಾಗುತ್ತಿರುವ ನರೇಂದ್ರ ಮೋದಿಗೆ ಎಲ್ಲ ನಾಯಕರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಬಾಯಾರಿಕೆ ನೀಗಿಸುತ್ತಿರುವ ಮೋದಿ ಮುಂದೆ ಯಾರಿಗೆ ನೀರು ಕುಡಿಸಲಿದ್ದಾರೆ?

ಈ ಲೋಕವೇ ಉಲ್ಟಾಪುಲ್ಟಾ!
ಅಲಹಾಬಾದ್ ಕುಂಭಮೇಳದಲ್ಲಿ ವಿಚಿತ್ರ ಸಾಧನೆ ಮಾಡುತ್ತಿರುವ ಸಾಧುಗಳಿಗೆ ಕೊರತೆಯೇ ಇಲ್ಲ. ಅಹವಾನ್ ಅಖಾರಕ್ಕೆ ಸೇರಿದ ನಗ್ನ ಸಾಧುವೊಬ್ಬ ಶಿರಶಾಸನ ಮಾಡುತ್ತಿರುವುದು, ಅಲ್ಲಿ ನೆರೆದಿದ್ದ ಜನರಿಗೆ ಕೇವಲ ಒಬ್ಬ ವ್ಯಕ್ತಿ ತಲೆಕೆಳಗಾಗಿ ನಿಂತಿದ್ದು ತೋರುತ್ತಿದ್ದರೆ, ಬೆತ್ತಲೆ ಸಾಧುವಿಗೆ ಇಡೀ ಲೋಕವೇ ತಲೆಕೆಳಗಾಗಿ ನಿಂತಂತೆ ಭಾಸವಾಗುತ್ತಿದೆ.

ಆ ತಾಯಿಯನ್ನು ಸಮಾಧಾನಪಡಿಸುವವರಾರು?
ಉತ್ತರ ಪ್ರದೇಶದ ಜಾನ್‌ಪುರದಲ್ಲಿ ವಾಹನವೊಂದು ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿ 11 ಜನರನ್ನು ಬಲಿ ತೆಗೆದುಕೊಂಡಿದೆ. ಹತ್ತಿರದ ಬಂಧುಗಳನ್ನು ಕಳೆದುಕೊಂಡು ರೋದಿಸುತ್ತಿರುವ ಆ ತಾಯಿಯನ್ನು ಸಮಾಧಾನಪಡಿಸುವವರಾರು?

ಅಡ್ವಾನಿ ಮುಖದಲ್ಲಿ ಇದೇನಿದು ದುಗುಡ?
ದೆಹಲಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸಭೆಯಲ್ಲಿ ಎಲ್ಲ ಹಿರಿಯ ನಾಯಕರು ಭಾಗವಹಿಸಿ, ಮುಂದಿನ ವರ್ಷ ನಡೆಯಬೇಕಾಗಿರುವ ಚುನಾವಣೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಪಕ್ಷದ ಹಿರಿಯ ನಾಯಕ 85 ವರ್ಷ ವಯಸ್ಸಿನ ಲಾಲ್ ಕೃಷ್ಣ ಅಡ್ವಾಣಿ ಅವರಲ್ಲಿ ವಿಶಿಷ್ಟವಾದ ದುಗುಡ ಮನೆಮಾಡಿದಂತೆ ಕಾಣುತ್ತಿದೆ. ಅದೇನಿರಬಹುದು?

ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿಕೊಡಿ ಪ್ಲೀಸ್!
ಕರ್ನಾಟಕದಲ್ಲಿ ಜೂನ್ 3ರೊಳಗೆ ವಿಧಾನಸಭೆ ಚುನಾವಣಾ ಪ್ರಕ್ರಿಯೆ ಮುಗಿಯುತ್ತದೆಂದು ಕೇಂದ್ರ ಚುನಾವಣಾ ಆಯುಕ್ತ ಬೆಂಗಳೂರಿನಲ್ಲಿ ಶನಿವಾರ ಘೋಷಿಸಿದೆ. ಎಷ್ಟೇ ಜನರು ಬಿಜೆಪಿ ಬಿಟ್ಟುಹೋಗಲಿ, ಮುಂದಿನ ಬಾರಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆಂದು ಕನಸು ಕಾಣುತ್ತಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನರೇಂದ್ರ ಮೋದಿಯನ್ನು ದೆಹಲಿಯಲ್ಲಿ ಅಭಿನಂದಿಸಿದ ರೀತಿ.

ಲಾಸ್ಟ್ ಮಿನಿಟ್ ಪ್ರಿಪರೇಷನ್ ಈಸ್ ದಿ ಬೆಸ್ಟ್
ಇಡೀ ವರ್ಷ ಎಷ್ಟೇ ಓದಿದರೂ ಕಡೆ ಘಳಿಗೆಯಲ್ಲಿ ಮನನ ಮಾಡಿಕೊಳ್ಳುವ ಪಾಠ ಹೆಚ್ಚು ಮನದಲ್ಲಿ ಉಳಿಯುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಮಾಡುವುದು ಇದನ್ನೇ. ಮಹಾರಾಷ್ಟ್ರದ ಕರಾಡದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತಯಾರಾಗುತ್ತಿರುವ ವಿದ್ಯಾರ್ಥಿನಿಯರು ಕಡೆ ನಿಮಿಷದ ತಯಾರಿಯಲ್ಲಿ ತೊಡಗಿರುವುದು. ಕರ್ನಾಟಕದಲ್ಲಿ ಏ.1ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ಆಲ್ ದಿ ಬೆಸ್ಟ್.

ಖಾಲಿ ರಸ್ತೆಯಲ್ಲಿ ಮಜಾ ಮಾಡುತ್ತಿರುವ ಮಕ್ಕಳು
ದೆಹಲಿಯ ವಿಜಯ್ ಚೌಕ್ ಬಳಿ ಶನಿವಾರ ಮಧ್ಯಾಹ್ನ ಖಾಲಿಖಾಲಿಯಾಗಿರುವ ರಸ್ತೆಯಲ್ಲಿ ಸೆಗ್ವೆ ರೈಡ್ ಮಾಡಿಕೊಂಡು ಮಜಾ ಉಡಾಯಿಸುತ್ತಿರುವ ಗಂಡು ಮಕ್ಕಳು. ಹೆಣ್ಣುಮಕ್ಕಳಿಗೆ ದೆಹಲಿ ಸುರಕ್ಷಿತ ತಾಣವಾಗುವುದು ಎಂದು?

ಮೂಕಾಂಬಿಕೆಯಲ್ಲಿ ಏನಂತ ಬೇಡಿಕೊಂಡ್ರು?
ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾಬೆನ್ ಅವರು ಶನಿವಾರ ಮಂಗಳೂರು ಜಿಲ್ಲೆಯ ಕೊಲ್ಲೂರಿಗೆ ಭೇಟಿ ನೀಡಿ ಮೂಕಾಂಬಿಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನರೇಂದ್ರ ಮೋದಿ ಅವರೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ ಮುಖೇಶ್ ಅಂಬಾನಿಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೂಕಾಂಬಿಕೆಯಲ್ಲಿ ಏನಂತ ಬೇಡಿಕೊಂಡ್ರು ಕೋಕಿಲಾಬೆನ್?












Click it and Unblock the Notifications