ಅರಮನೆ ಮೈದಾನದಲ್ಲಿ ಐಎಎಸ್ ಅದ್ದೂರಿ ಮದುವೆ

ಅಸಲಿಗೆ ರಾಜಕೀಯ ಪಕ್ಷಗಳ ಸಭೆ-ಸಮಾರಂಭಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ಹೇರಿ ರಾಜ್ಯ ಸರಕಾರ ಆಗಸ್ಟ್ 2ರಂದು ಆದೇಶ ಹೊರಡಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಗೃಹ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಿಧಾನ ಪರಿಷತ್ತಿನ ಸಭಾನಾಯಕ ವಿ. ಸೋಮಣ್ಣ ಅವರೇ ತಿಳಿಸಿದ್ದರು.
ಆದರೆ ಅವು ಯಾವುವೂ ಆಚರಣೆಯಲ್ಲಿಲ್ಲ. ಯುವ ಐಎಎಸ್ ಅಧಿಕಾರಿಯೊಬ್ಬ ಈ ಅನಧಿಕೃತ ವಿಶಾಲ ಜಾಗದಲ್ಲಿ ತನ್ನ ಮದುವೆಯ ಆರತಕ್ಷತೆಯನ್ನು ಮೊನ್ನೆ ಭಾನುವಾರ ಸಾಂಗೋಪಾಂಗವಾಗಿ ನೆರವೇರಿಸಿಕೊಂಡಿದ್ದಾರೆ. ಇದಕ್ಕೆ ರಾಜ್ಯಪಾಲ ಭಾರದ್ವಾಜ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದಾರೆ.
ಕುತೂಹಲದ ಸಂಗತಿಯೆಂದರೆ ಹೀಗ್ಹೀಗೆ ಸುಪ್ರೀಂ ಕೋರ್ಟ್ ಸೂಚನೆ ಇದೆ. ಇಲ್ಲಿ ಯಾರಿಗೂ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಸರಕಾರವು ತಮ್ಮ ಮನವಿಯನ್ನು ತಿರಸ್ಕರಿಸಿದರೂ ಆ ಯುವ ಅಧಿಕಾರಿ ರಿಸೆಪ್ಷನ್ ಅದ್ದೂರಿಯಾಗಿ ನಡೆಸಿಕೊಂಡಿದ್ದಾರೆ.
ಏನೋ ಪಾಪಾ ಕಾನೂನಿನ ತಿಳುವಳಿಕೆ ಇಲ್ಲದವರು(?) ಮದುವೆಯಾಗುವ ಹುಮ್ಮಸ್ಸಿನಲ್ಲಿ ಹೀಗೆ ಎಡವಟ್ಟು ಮಾಡಿಕೊಂಡಿರಬಹುದು ಅಂದುಕೊಂಡರೆ ಇವರ ಪಟಾಲಂಗಾದರೂ ಬುದ್ಧಿಬೇಡವಾ? ಅಸಲಿಗೆ ಇವರು ಯಾರು, ಇವರ ನೆಂಟರಿಷ್ಟರು ಯಾರು ಅಂದುಕೊಂಡಿರಿ?
ವಧು ಯಾರು- ವರ ಯಾರು?:
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮದುವೆಯಾಗಿದ್ದು ಡಿ. ರಣದೀಪ್. ಇವರು ಹಣಕಾಸು ಇಲಾಖೆಯಲ್ಲಿ ಡೆಪ್ಯುಟಿ ಸೆಕ್ರೆಟರಿ. ರಣದೀಪ್ 2006ನೇ ಬ್ಯಾಚ್ ಐಎಎಸ್ಸು. ಇವರಪ್ಪ ಡಾ. ಐ ದೇವೇಂದಿರನ್, ನಿವೃತ್ತ ಹಿರಿಯ ಐಎಎಸ್ಸು.
ರಣದೀಪ್ ಮದುವೆಯಾಗಿದ್ದು ಅರ್ಪಿತಾ ರಾಜ್ ಅವರನ್ನು. ಅರ್ಪಿತಾ ಬಂದು ಬನ್ನೇರುಘಟ್ಟ ಉದ್ಯಾನವನದ ಮುಖ್ಯಸ್ಥ ಡಾ. ಡಿ ರಾಜು, ಹಿರಿಯ ಐಎಫ್ಎಸ್. ಅದಕ್ಕೇ ಹೇಳಿದ್ದು ಉಳ್ಳವರು ಏನು ಬೇಕಾದರೂ ಮಾಡಬಹುದು... ಅಂತ. ಏನೋ ದೊಡ್ಡವರ ವಿಷ್ಯಾ ನಮಗ್ಯಾಕೆ ಬಿಡಿ.












Click it and Unblock the Notifications