ಕೆಜೆಪಿ ಅಧ್ಯಕ್ಷಗಿರಿ : ಬಿಎಸ್‌ವೈಗೆ ಕೋರ್ಟ್ ನೋಟಿಸ್

ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್, ನಾನೇ ಪಕ್ಷದ ಅಧ್ಯಕ್ಷನಾಗಿದ್ದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಧನಂಜಯ್ ಕುಮಾರ್ ಗೆ ಸ್ಥಾನ ಬಿಟ್ಟುಕೊಟ್ಟಿದೆ. ಆದರೆ, ಧನಂಜಯ್ ಕುಮಾರ್ ಅವರು ಯಡಿಯೂರಪ್ಪ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ನನ್ನನ್ನು ಆ ಸ್ಥಾನದಿಂದಲೇ ವಜಾಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಜೆಪಿ ಪಕ್ಷಕ್ಕೆ ಈಗಲೂ ನಾನೇ ಅಧಿಕೃತ ಅಧ್ಯಕ್ಷ. ರಾಜ್ಯದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಜೆಪಿ ಪಕ್ಷದ ಅಭ್ಯರ್ಥಿಗಳೆಂದು ಯಡಿಯೂರಪ್ಪ ಬೆಂಬಲಿಗರು ಸ್ಪರ್ಧಿಸಿದ್ದಾರೆ. ಆದರೆ, ಕೆಜೆಪಿ ಪಕ್ಷದ ಅಧ್ಯಕ್ಷನಾಗಿ ಯಾರಿಗೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಾನು ಸೂಚಿಸಿದ್ದೇನೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ತಡೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಯಡಿಯೂರಪ್ಪ ಅವರು ಕೇಂದ್ರ ಚುನಾವಣಾ ಆಯೋಗಕ್ಕೂ ನಕಲಿ ದಾಖಲೆಗಳನ್ನು ನೀಡಿ, ಪಕ್ಷದ ಅಧ್ಯಕ್ಷ ಹುದ್ದೆ ಪಡೆದಿದ್ದಾರೆ. ಆದ್ದರಿಂದ ಕೇಂದ್ರ ಚುನವಾಣಾ ಆಯೋಗಕ್ಕೂ ಯಡಿಯೂರಪ್ಪ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಕುರಿತು ವಿವರಣೆ ನೀಡುವಂತೆ ಸೂಚಿಸಿ, ಯಡಿಯೂರಪ್ಪ, ಧನಂಜಯ್ ಕುಮಾರ್ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿದೆ.
ತನಿಖೆಗೆ ಆದೇಶ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸಲ್ಲಿಸಿದ್ದ ವಂಚನೆ ಪ್ರಕರಣದ ಕುರಿತು ತನಿಖೆ ನಡೆಸಿ, ವರದಿ ನೀಡುವಂತೆ ಬುಧವಾರ ಮಧ್ಯಾಹ್ನ ಬೆಂಗಳೂರಿನ 8ನೇ ಎಂಸಿಎಂಎಂ ನ್ಯಾಯಾಲಯ ಸಂಜಯ ನಗರ ಪೊಲೀಸರಿಗೆ ಆದೇಶಿಸಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನ್ಮದಿನದಂದೇ ಅವರ ವಿರುದ್ಧ ಪದ್ಮನಾಭ ಪ್ರಸನ್ನ ಕುಮಾರ್ ಮತ್ತೊಮ್ಮೆ ಗುಡುಗಿದ್ದಾರೆ. ಸ್ಥಳೀಯ ಮತ್ತು ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಾಗ ಕೆಜೆಪಿ ಅಧ್ಯಕ್ಷ ಹುದ್ದೆ ಬಗೆಹರಿಯುತ್ತದೆಯೆ?












Click it and Unblock the Notifications