ಕರ್ನಾಟಕದ ಭವಿಷ್ಯ ಪ್ರಾದೇಶಿಕ ಪಕ್ಷದಲ್ಲಿ ಅಡಗಿದೆ

ನಗರದ ಶಿಕ್ಷಕರ ಸದನದಲ್ಲಿ ಭಾನುವಾರ(ಫೆ.24) ಕರ್ನಾಟಕ ಜನತಾ ಪಕ್ಷದ ಕಾರ್ಮಿಕ ಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿದ ಯಡಿಯೂರಪ್ಪ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿವೆ. ಇದಕ್ಕಾಗಿ ಕೆಜೆಪಿ ಎಲ್ಲ ರೀತಿಯಿಂದಲೂ ದ್ಧತೆಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ದೇಶದಲ್ಲಿರುವ ರಾಷ್ಟ್ರೀಯ ಪಕ್ಷಗಳಿಂದ ಕಾರ್ಮಿಕರ ಹಾಗೂ ರೈತರ ಸಮಸ್ಯೆಗಳನ್ನು ಪರಿಹರಿಸದಂತಹ ಪರಿಸ್ಥಿತಿ ಉಂಟಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ಕ್ರಮ ಅನುಸರಿಸುತ್ತಿದೆ. ದೇಶದ ಮಧ್ಯಮ ವರ್ಗದ ಜನತೆಯ ಮೇಲೆ ರಾಷ್ಟ್ರೀಯ ಪಕ್ಷಗಳು ಸವಾರಿ
ನಡೆಸುತ್ತಿವೆ. ಈ ಎಲ್ಲ ಬೆಳವಣಿಗೆಗಳ ವಿರುದ್ಧ ಮತದಾರರು ರಾಷ್ಟ್ರೀಯ ಪಕ್ಷಗಳಿಗೆ ದಿಟ್ಟ ಉತ್ತರ ನೀಡಲಿವೆ ಎಂಬ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿನ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ಬೇಕಿಲ್ಲ. ಎಲ್ಲಾ ಸಮಸ್ಯೆಗಳಿಗೂ ಹೈಕಮಾಂಡ್ ಮುಂದೆ ಚರ್ಚೆ ನಡೆಸಬೇಕಾದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಪಕ್ಷಗಳು ಇರುವುದು ದುರಂತದ ವಿಷಯ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಸರಕಾರ ಅಧಿಸೂಚನೆ ಹೊಡಿಸಿ
ರಾಜ್ಯಕ್ಕೆ ಅನ್ಯಾಯ ಮಾಡಿದೆ. ಈ ಅಧಿಸೂಚನೆ ಎಂದರೆ ಏನು ಎಂಬುದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖಂಡರಿಗೆ ಅರಿವಿಲ್ಲದಂತಾಗಿದೆ
ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ 1985ರ ಸಂದರ್ಭದಲ್ಲಿ ವಿಧಾನಮಂಡಲದಲ್ಲಿ ಕಾರ್ಮಿಕರ ಪರ ಹೋರಾಟ ಮಾಡಲು ಮೂರ್‍ನಾಲ್ಕು ಕಾರ್ಮಿಕ ಮುಖಂಡರು ಇರುತ್ತಿದ್ದರು. ಆದರೆ,
ಪ್ರಸಕ್ತ ದಿನಗಳಲ್ಲಿ ಯಾವೊಬ್ಬ ಕಾರ್ಮಿಕ ಮುಖಂಡ ವಿಧಾನಮಂಡಲದಲ್ಲಿಲ್ಲ. ಬರುವಂಥ ದಿನಗಳಲ್ಲಿ ಮೈಕಲ್ ಫರ್ನಾಂಡೀಸ್ ನಂತಹ ಕಾರ್ಮಿಕ ಮುಖಂಡರು ವಿಧಾನಸಭೆ ಪ್ರವೇಶಿಸುವಂತಾಗಲಿ ಎಂದು ಯಡಿಯೂರಪ್ಪ ಆಶಿಸಿದರು.
ಸಮಾವೇಶದಲ್ಲಿ ಮಾಜಿ ಸಚಿವೆ ಶೋಭಾಕರಂದ್ಲಾಜೆ, ಮಾಜಿ ಶಾಸಕ ವಿಶ್ವನಾಥ್, ಹಿರಿಯ ಕಾರ್ಮಿಕ ಮುಖಂಡ ಮೈಕಲ್ ಫರ್ನಾಂಡೀಸ್, ಕಾರ್ಮಿಕ ಘಟಕದ ಅಧ್ಯಕ್ಷ ಕಾಳಪ್ಪ ಮೊದಲಾದವರು ಹಾಜರಿದ್ದರು.












Click it and Unblock the Notifications