ಆಸ್ತಿ ತೆರಿಗೆ ಹೆಚ್ಚಳದ ವಿರುದ್ಧ ಅಶೋಕ್ ಗರಂ

ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿ, ಬಿಬಿಎಂಪಿ ಸರಿಯಾಗಿ ತೆರಿಗೆ ಸಂಗ್ರಹಣೆ ಮಾಡುವುದಿಲ್ಲ. ಆದ್ದರಿಂದ ನಷ್ಟದಲ್ಲಿದೆ, ಸರಿಯಾದ ತೆರಿಗೆ ಸಂಗ್ರಹವಿಲ್ಲದೆ ಬಿಬಿಎಂಪಿಗೆ 207.35 ಕೋಟಿ ರೂ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಆದ್ದರಿಂದ ಆಸ್ತಿ ತೆರಿಗೆಯನ್ನು ಶೇ 15ರಷ್ಟು ಹೆಚ್ಚಿಸಲು ಪಾಲಿಕೆ ನಿರ್ಧರಿಸಿದೆ ಎಂದು ಪಾಲಿಕೆ ಆಧಿಕಾರಿಗಳು ಹೇಳುತ್ತಿದ್ದಾರೆ. ಸಿಎಜಿ ವರದಿ ಆಧಾರ ರಹಿತವಾಗಿದೆ. ವರದಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ, ಆದ್ದರಿಂದ ತೆರಿಗೆ ಹೆಚ್ಚಳ ಮಾಡಬಾರದು ಎಂದು ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು.
ತೆರಿಗೆ ಹೆಚ್ಚಳ ಪ್ರಸ್ತಾಪವನ್ನು ಹಿಂಪಡೆಯಿರಿ ಇಲ್ಲವೇ ಸದ್ಯಕ್ಕೆ ಮುಂದೂಡಿ ಎಂದು ಬಿಬಿಎಂಪಿ ಆಯುಕ್ತ ಸಿದ್ಧಯ್ಯ ಮತ್ತು ಮೇಯರ್ ವೆಂಕಟೇಶ್ ಮೂರ್ತಿಯವರಿಗೆ ಸೂಚಿಸಿದರು. ಚುನಾವಣೆಗಳು ಹತ್ತಿರವಾಗುತ್ತಿರುವಾಗ ಆಸ್ತಿ ತೆರಿಗೆ ಹೆಚ್ಛಳ ಮಾಡಿದರೆ ಮತದಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತಿದೆ ಎಂದು ಅಶೋಕ್ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರಾ ಎನ್ನುವ ಅನುಮಾನವೂ ಇದೆ.
ಪಾಲಿಕೆಯ ವಿರೋಧ ಪಕ್ಷಗಳು ತೆರಿಗೆ ಹೆಚ್ಚಳ ವಿರೋಧಿಸಿದ್ದವು. ಬಿಬಿಎಂಪಿ ಸಭೆಯಲ್ಲಿ ಚರ್ಚಿಸದೇ ಪಾಲಿಕೆ ತೆರಿಗೆ ಹೆಚ್ಚಳ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗೂ ಸಭೆಯ ಒಪ್ಪಿಗೆ ಪಡೆದಯೇ ಇದಕ್ಕೆ ಸಂಬಂಧಿಸಿದ ಕಡತವನ್ನು ಪಾಲಿಕೆ ಆಯುಕ್ತ ಸಿದ್ಧಯ್ಯ ಅವರ ಅನುಮತಿಗಾಗಿ ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿದ್ದವು.
ಕರ್ನಾಟಕ ಮುನ್ಸಿಪಲ್ ನಿಯಮ 1976ರ ಪ್ರಕಾರ ಮಹಾನಗರ ಪಾಲಿಕೆಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆಯನ್ನು ಶೇ 15 ರಿಂದ 30 ವರೆಗೆ ಹೆಚ್ಚಿಸುವ ಅಧಿಕಾರ ಹೊಂದಿವೆ. 2011 ಏಪ್ರಿಲ್ ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ಆದ್ದರಿಂದ ತೆರಿಗೆ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು ಎನ್ನುತ್ತಿದ್ದಾರೆ ಬಿಬಿಎಂಪಿಯ ಅಧಿಕಾರಿಗಳು.












Click it and Unblock the Notifications