ನೌಕರರ ಭವಿಷ್ಯ ನಿಧಿ ಬಡ್ಡಿ ತುಸು ಹೆಚ್ಚಳ

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸಲಹಾ ಮಂಡಳಿಯಾಗಿರುವ ಹಣಕಾಸು ಮತ್ತು ಹೂಡಿಕೆ ಸಮಿತಿ ನೀಡಿದ ಸಲಹೆಯಂತೆ ಪ್ರಸಕ್ತ ವರ್ಷ ನೌಕರರ ಭವಿಷ್ಯ ನಿಧಿಗೆ ಶೇ 8.5 ಬಡ್ಡಿಯನ್ನು ನೀಡಲು ತೀರ್ಮಾನಿಸಿದ್ದು, ಇದೇ 25ರಂದು ಅಂತಿಮ ಆದೇಶ ಹೊರಡಿಸುವ ಸಾಧ್ಯತೆಯಿದೆ. 2012-23ನೇ ಸಾಲಿನಲ್ಲಿ EPFO ಬಳಿ 2,63,000 ಕೋಟಿ ರೂ. ಕಾಪು ನಿಧಿ ಸಂಗ್ರಹಗೊಂಡಿದ್ದು, 21,147 ಕೋಟಿ ರೂ. ನಿವ್ವಳ ಆದಾಯದ ನಿರೀಕ್ಷೆಯಲ್ಲಿದೆ.
ಶೇ 8.6ರ ಬಡ್ಡಿ ದರದಲ್ಲಿ ಚಂದಾದಾರರಿಗೆ ಹಣ ಪಾವತಿಸಿದಲ್ಲಿ 240.49 ಕೋಟಿ ರೂ ಕೊರತೆಯನ್ನು ಎದುರಿಸುವ ಸಾಧ್ಯತೆಗಳಿರುವುದರಿಂದ ಭವಿಷ್ಯ ನಿಧಿ ಠೇವಣಿಗಳಿಗೆ ಶೇ. 8.5 ಬಡ್ಡಿ ದರದಲ್ಲಿ ಹಣವನ್ನು ಪಾವತಿಸುವುದರಿಂದ 4.13 ಕೋಟಿ ರೂ. ಉಳಿಕೆಯಾಗಲಿದೆ. 2010-11ನೇ ಸಾಲಿನಲ್ಲಿ ಸಂಸ್ಥೆ ಶೇ. 9.5 ಬಡ್ಡಿ ದರವನ್ನು ಪಾವತಿಸಿದ್ದರೆ ಕಳೆದ ಸಾಲಿನಲ್ಲಿ ಶೇ. 8.25 ಬಡ್ಡಿ ದರವನ್ನು ಪಾವತಿಸಿತ್ತು.
ಭವಿಷ್ಯ ನಿಧಿ ಬಡ್ಡಿ ದರದ ಸಂಬಂಧ ಅಂತಿಮ ಅಧಿಸೂಚನೆಯನ್ನು ಸರಕಾರ ಹಣಕಾಸು ಖಾತೆಯೊಡನೆ ಸಮಾಲೋಚನೆ ನಡೆಸಿದ ಬಳಿಕ ಹೊರಡಿಸಲಿದ್ದು, ಈ ಬಾರಿ 5 ಕೋಟಿಗೂ ಅಧಿಕ ಭವಿಷ್ಯ ನಿಧಿ ಚಂದಾದಾರರ ಠೇವಣಿಗೆ ಶೇ 8.5 ಬಡ್ಡಿ ದರವನ್ನು ಭವಿಷ್ಯ ನಿಧಿ ಸಂಸ್ಥೆ ನೀಡಲಿದೆ.












Click it and Unblock the Notifications