ಬಿಎಸ್ಆರ್ ಸಮಾವೇಶ: ದ್ವಾರಕನಾಥ್ ರಾಜೀನಾಮೆ

ರಾಯಚೂರಿನ ಲಿಂಗಸೂರು ರಸ್ತೆಯ ಸಾತ್ ಮೈಲ್ ಕ್ರಾಸ್ ಬಳಿ ಇಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಿದೆ. ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದಾರೆ. ಚುನಾವಣೆಯ ಸಿದ್ಧತೆಯಲ್ಲಿರುವ ರಾಮುಲು ಅವರು ತಮ್ಮ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಈ ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಬೃಹತ್ ಸಮಾವೇಶವನ್ನು ಆಯೋಜಿಸಿದ್ದಾರೆ.
ಪಕ್ಷಕ್ಕೆ ರಕ್ಷಿತಾ ಗುಡ್ ಬೈ?: ಆದರೆ ಪಕ್ಷದ ಕಾರ್ಯಾಧ್ಯಕ್ಷೆ, ವರ್ಚಸ್ವಿ ನಾಯಕಿ, ನಟಿ ರಕ್ಷಿತಾ ಅವರು ಸಮಾವೇಶದಿಂದ ವಿಮುಖರಾಗಿದ್ದು ತಾರಾಮೆರುಗು ಇಲ್ಲದೆ ಸಭೆ ಸೊರಗಿದೆ. ಈ ಮಧ್ಯೆ, ನಟಿ ರಕ್ಷಿತಾ ಅವರು ಪಕ್ಷ ಬಿಡುತ್ತಾರೆ ಎಂಬ ಮಾತುಗಳೂ ಸಮಾವೇಶದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ ಬಳಿಕ ನಟಿ ರಕ್ಷಿತಾ ಅವರು ಬಿಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಸಿಎಸ್ ದ್ವಾರಕನಾಥ್ ರಾಜೀನಾಮೆ: ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಪ್ರಸ್ತುತ ಬಿಎಸ್‌ಆರ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ಸಿಎಸ್ ದ್ವಾರಕನಾಥ್ ಅವರು ರಾಮುಲು ವಿರುದ್ಧ ಮುನಿಸಿಕೊಂಡಿದ್ದು, ಸಭೆಯನ್ನು ಬಹಿಷ್ಕರಿಸಿದ್ದಾರೆ. ಜತೆಗೆ, ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದಾರೆ.












Click it and Unblock the Notifications