ದೆಹಲಿ ಸಿಎಂ ಶೀಲಾಗೆ ಮತ್ತೊಂದು 'ಆಘಾತ'

ಆರೋಪಿ ತಾರಿಕ್ ಷೇಕ್ (28) ಮ್ಯಾನೇಜ್ಮೆಂಟ್ ಪದವೀಧರ. ಈತ ತನ್ನ ವಿದೇಶಿ (ವಿದೇಶ ಯಾವುದು ಎಂಬುದನ್ನು ಬಹಿರಂಗಪಡಿಸಿಲ್ಲ) ಸ್ನೇಹಿತೆಯ ಜತೆ ಪಾರ್ಟಿಗೆ ಹೋಗಿದ್ದಾಗ ದಕ್ಷಿಣ ದೆಹಲಿಯ ಹೌಸ್ ಖಾಸ್ ಪ್ರದೇಶದಲ್ಲಿ ಈ ಕುಕೃತ್ಯವೆಸಗಿದ್ದಾನೆ.
ಆರೋಪಿ ತಾರಿಕನನ್ನು ಪೊಲೀಸರು ಬಂಧಿಸಿದ್ದು, ಯುವತಿಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತ ಯುವತಿ ಗುರ್ ಗಾಂವ್ ಖಾಸಗಿ ಸಂಸ್ಥೆಯಲ್ಲಿ ತರಬೇತಿಯಲ್ಲಿರುವ ಅಧಿಕಾರಿ. ಇವರಿಬ್ಬರೂ 6 ತಿಂಗಳ ಹಿಂದೆ ಸ್ನೇಹಿತರಾಗಿದ್ದಾರೆ. ಆ ಸಲುಗೆಯಲ್ಲೇ ಸೋಮವಾರ ಸಂಜೆ ಮಾಳವಿಯಾ ನಗರದಲ್ಲಿ ಪಾರ್ಟಿಯೊಂದಕ್ಕೆ ಹೋಗಿದ್ದಾರೆ.
ಪಾರ್ಟಿ ನಂತರ ಆರೋಪಿ ತಾರಿಕ್, ಯುವತಿಯನ್ನು ತನ್ನ ಸ್ನೇಹಿತನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಗೆ ಕುಡಿಯುಲು ಮದ್ಯ ನೀಡಿದ್ದಾನೆ. ಅದಾದನಂತರ, ತನ್ನದೇ ಕಾರಿನಲ್ಲಿ ಆಕೆಯನ್ನು ಮನೆಗೆ ಬಿಟ್ಟುಬರುವುದಾಗಿ ಪುಸಲಾಯಿಸಿದ್ದಾನೆ. ಆದರೆ ಸೀದಾ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಮತ್ತಷ್ಟು ಮದ್ಯ ಕುಡಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಅದಾದನಂತರ ಘಟನೆಯನ್ನು ಬಹಿರಂಗಪಡಿಸಿದರೆ ಅಥವಾ ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಬಾಧಿತ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾಳೆ.
ಬೆಳಗ್ಗೆಯ ವೇಳೆಗೆ ಯುವತಿ ಅವನ ಮನೆಯಿಂದ ಹೊರಬಿದ್ದು, ಸೀದಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.












Click it and Unblock the Notifications